ಮೊದಲ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಮೊದಲ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

LK   ¦    Jul 05, 2019 12:45:53 PM (IST)
ಮೊದಲ ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ

ಮೈಸೂರು: ಮೊದಲ ಆಷಾಢ ಶುಕ್ರವಾರ ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ನಸುಕಿನ ಜಾವದಿಂದಲೇ ಸಾವಿರ ಮೆಟ್ಟಿಲುಗಳನ್ನು ಹತ್ತಿ ಭಕ್ತರು ದೇಗುಲಕ್ಕೆ ಬರುತ್ತಿದ್ದರೆ, ಮತ್ತೊಂದೆಡೆ ಸರ್ಕಾರಿ ಬಸ್‍ನಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಮುಂಜಾನೆ ಸಮೀಪದ ದೇವಿಕೆರೆಯಿಂದ ಶುದ್ಧ ಜಲವನ್ನು ತಂದು ಚಾಮುಂಡೇಶ್ವರಿಗೆ ಜಲಾಭಿಷೇಕ ಮಾಡುವ ಮೂಲಕ ಪೂಜೆ ಆರಂಭಿಸಲಾಯಿತು. ಆ ನಂತರ ರುದ್ರಾಭಿಷೇಕ, ಪಂಚಾಭಿಷೇಕ ನಡೆದವು. ಬಳಿಕ ಅಲಂಕಾರ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ನಟ ದರ್ಶನ್ ಸೇರಿದಂತೆ ಹಲವರು ಚಾಮುಂಡೇಶ್ವರಿಯ ದರ್ಶನಪಡೆದರು.

ಚಾಮುಂಡಿಬೆಟ್ಟಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಾರ್ವಜನಿಕರ ವಾಹನ ನಿಷೇಧಿಸಿದ್ದು, ಲಲಿತಮಹಲ್‍ನಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೆ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಬೆಟ್ಟದಲ್ಲಿ ಭಕ್ತರು ಸರತಿ ಸಾಲಿನಲ್ಲಿ ದರ್ಶನ ಮಾಡಲು ಬ್ಯಾರಿಕೇಡ್, ಪ್ರಸಾದ ವಿತರಿಸಲು ಶೆಡ್ ಹಾಕಲಾಗಿದ್ದು, ಇಲ್ಲಿ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಭಕ್ತರಿಗೆ ಉಚಿತ ದರ್ಶನದೊಂದಿಗೆ 50 ರೂ. 300, 500 ರೂ ವಿಶೇಷ ಟಿಕೆಟ್ ದರ್ಶನದ (ಅಭಿಷೇಕ) ವ್ಯವಸ್ಥೆ ಮಾಡಲಾಗಿದೆ. ಲಲಿತಮಹಲ್ ಹೆಲಿಪ್ಯಾಡ್ ಹಾಗೂ ಮಹಿಷಾಸುರ ಪ್ರತಿಮೆ ಬಳಿ ಟಿಕೆಟ್ ಮಾರಾಟಕ್ಕಾಗಿ ಕೌಂಟರ್ ತೆರೆಯಲಾಗಿದ್ದು ಭಕ್ತರು ಇಲ್ಲಿ ಟೆಕೆಟ್ ಪಡೆದು ದರ್ಶನ ಮಾಡಬಹುದಾಗಿದೆ.

ಇವತ್ತು ಬೆಳಗಿನ ಜಾವ 3.30ರಿಂದಲೇ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕಗಳು ಬೆಳಗ್ಗೆ 9.30ಕ್ಕೆ ಮಹಾ ಮಂಗಳಾರತಿ ನಡೆದಿದ್ದು, ಸಂಜೆ 6 ರಿಂದ 7.30ರವರೆಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಇರಲಿದೆ. ಈ ವೇಳೆ ದೇವರಿಗೆ ನಾನಾ ಅಭಿಷೇಕ ನಡೆಯಲಿದೆ. ದೇವಸ್ಥಾನದ ಗರ್ಭಗುಡಿಯನ್ನು ವಿವಿಧ ಬಗೆಯ ಹೂ ಮತ್ತು ಹಣ್ಣುಗಳಿಂದ ಅಲಂಕರಿಸಲಾಗಿದೆ. ಗರ್ಭ ಗುಡಿಯಿಂದ ಹೊರ ಭಾಗವನ್ನು ನಾನಾ ಹೂ ಗಳಿಂದ ಅಲಂಕರಿಸಲಾಗಿದೆ.

22 ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡಲು ಕಸದ ತೊಟ್ಟಿಗಳನ್ನಿಡಲಾಗಿದೆ.. ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಚಾಮುಂಡಿಬೆಟ್ಟದಲ್ಲಿ ಜನಸಾಗರವೇ ಹರಿದು ಬಂದಿದ್ದು ಕಣ್ಣು ಹಾಯಿಸಿದುದ್ದಕ್ಕೂ ಭಕ್ತರ ಸಾಲು ಕಂಡು ಬರುತ್ತಿದೆ. ಮಧ್ಯರಾತ್ರಿವರೆಗೂ ಇದೇ ರೀತಿಯಲ್ಲಿ ಭಕ್ತರು ದೌಡು ಕಂಡು ಬರಲಿದೆ.