ಯುಪಿಎ ಸರ್ಕಾರದಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪವಿತ್ತು: ಎಸ್.ಎಂ.ಕೃಷ್ಣ

ಯುಪಿಎ ಸರ್ಕಾರದಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪವಿತ್ತು: ಎಸ್.ಎಂ.ಕೃಷ್ಣ

LK   ¦    Feb 09, 2019 07:04:43 PM (IST)
ಯುಪಿಎ ಸರ್ಕಾರದಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪವಿತ್ತು: ಎಸ್.ಎಂ.ಕೃಷ್ಣ

ಮಂಡ್ಯ: ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರು ಬಿಜೆಪಿ ಸೇರಿರುವುದರ ಹಿಂದಿನ ರಹಸ್ಯವನ್ನು ಇದೀಗ ಬಿಚ್ಚಿಟ್ಟಿದ್ದಾರೆ.

ಯುಪಿಎ ಸರ್ಕಾರದ ಆಡಳಿತದಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪದಿಂದಾಗಿ ನಾನು ಕಾಂಗ್ರೆಸ್ ಪಕ್ಷ ಮತ್ತು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದ್ದಾರೆ.

ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಆಡಳಿತದಲ್ಲಿ ರಾಹುಲ್ ಗಾಂಧಿ ಹಸ್ತಕ್ಷೇಪ ಹೆಚ್ಚಾಗಿತ್ತು. 80 ವರ್ಷ ಮೀರಿದವರನ್ನು ಸರ್ಕಾರದಿಂದ ಹೊರಗಿಡಬೇಕು ಎಂದು ಫರ್ಮಾನು ಹೊರಡಿಸಿದರು. ಇದು ನನ್ನ ಕಿವಿಗೆ ಬಿದ್ದ ತಕ್ಷಣವೇ ರಾಜೀನಾಮೆ ಕೊಟ್ಟು ಹೊರಬಂದೆ ಎನ್ನುವ ಮೂಲಕ ರಾಹುಲ್ ಗಾಂಧಿ ಅವರ ಕಾರ್ಯವೈಖರಿಯನ್ನು ಬಿಚ್ಚಿಟ್ಟಿದ್ದಾರೆ.

2004ರಿಂದ 2014ರವರೆಗೆ 10 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‍ಸಿಂಗ್ ಅವರಿಗಿಂತ ರಾಹುಲ್‍ ಗಾಂಧಿಗೆ ಹೆಚ್ಚು ಅಧಿಕಾರವಿತ್ತು. 2009ರಿಂದ 2014ರ 2ನೇ ಅವಧಿಯಲ್ಲಿ ನಾನು ಮಂತ್ರಿ ಮಂಡಲದಲ್ಲಿ ವಿದೇಶಾಂಗ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಕ್ಯಾಬಿನೆಟ್‍ನಲ್ಲಿ ವಿಷಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಕೈಯಲ್ಲಿ ಮಂತ್ರಿ ಮಂಡಲ ಹಿಡಿತವಿರಲಿಲ್ಲ. ಆ ಸಂದರ್ಭದಲ್ಲಿ ದೇಶದಲ್ಲಿ ದೊಡ್ಡ ದೊಡ್ಡ ಹಗರಣಗಳು ನಡೆಯಲು ಪ್ರಾರಂಭವಾದವು. ಕಾಮನ್‍ವೆಲ್ತ್ ಗೇಮ್, 2ಜಿ, ಕಲ್ಲಿದ್ದಲು ಹಗರಣಗಳು ಹೆಚ್ಚಾದವು. ಇದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ಮಂತ್ರಿಗಳ ಮೇಲೆ ಮನಮೋಹನ್ ಸಿಂಗ್ ಹಿಡಿತ ಸಾಧಿಸಲು ಆಗಲೇ ಇಲ್ಲ ಎಂದು ಕಾಂಗ್ರೆಸ್ ಆಡಳಿತ ವೈಖರಿ ಬಗ್ಗೆ ಕಿಡಿಕಾರಿದರು.

ಒಬ್ಬ ನರೇಂದ್ರ ಮೋದಿಯನ್ನು ಸೋಲಿಸಲು 20ಕ್ಕೂ ಹೆಚ್ಚು ಪಕ್ಷಗಳು ಒಂದಾಗಿ ಮಹಾಘಟಬಂಧನ್ ಮಾಡಿಕೊಂಡಿವೆ ಎಂದು ವ್ಯಂಗ್ಯವಾಡಿದರಲ್ಲದೆ, ನನ್ನ ಜೊತೆ ಕಾಂಗ್ರೆಸ್ ಪಕ್ಷದಲ್ಲಿದ್ದವರು ಬಿಜೆಪಿ ಬರಬೇಕು ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿ, ಲೋಕಸಭೆ ಚುನಾವಣೆ ದೇಶದಲ್ಲಿ ಅತ್ಯಂತ ಮಹತ್ವವಾದದ್ದು. ಈ ಬಾರಿಯೂ ಬಿಜೆಪಿಗೆ ಯಶಸ್ಸು ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.