ಕಬ್ಬಿನ ಹಣ ಪಾವತಿಸದೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

ಕಬ್ಬಿನ ಹಣ ಪಾವತಿಸದೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

LK   ¦    Apr 15, 2019 05:50:04 PM (IST)
ಕಬ್ಬಿನ ಹಣ ಪಾವತಿಸದೆ ಕಾರ್ಖಾನೆ ವಿರುದ್ಧ ಪ್ರತಿಭಟನೆ

ಮದ್ದೂರು: ಸಕ್ಕರೆ ಕಾರ್ಖಾನೆಗಳು ಮತ್ತು ರೈತರ ಒಪ್ಪಂದ ಪ್ರಕಾರ ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಕಬ್ಬಿನ ಹಣ ಪಾವತಿ ಮಾಡಬೇಕು ಎಂದು ಆಗ್ರಹಿಸಿ ರೈತ ಮತ್ತು ಕಾರ್ಮಿಕ ಕಾಂಗ್ರೆಸ್ ಜಿಲ್ಲಾ ಸಮಿತಿಯ ವತಿಯಿಂದ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟನೆ ಮಾಡಿದರು.

ಈ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿರುವ ಕಬ್ಬಿನ ಬಾಕಿ ಹಣ ನೀಡು ಎಂದು ಆಗ್ರಹ ಮಾಡಿದರು.

ರೈತ ಮತ್ತು ಕಾರ್ಮಿಕ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್‍ಕುಮಾರ್ ಮಾತನಾಡಿ, ಕೊಪ್ಪದ ಎನ್.ಎಸ್.ಎಲ್. ಹಾಗೂ ಭಾರತೀ ನಗರದ ಚಾಮ್ ಷುಗರ್ಸ್ ಸಕ್ಕರೆ ಕಾರ್ಖಾನೆಗಳು ರೈತರು ಕಬ್ಬು ಸರಬರಾಜು ಮಾಡಿ 6 ತಿಂಗಳು ಕಳೆದರೂ ಕಬ್ಬಿನ ಬಾಕಿ ಹಣ ನೀಡಿಲ್ಲ. ರೈತರ ಬದುಕಿನ ಜತೆಯಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ರೈತರ ಕಬ್ಬಿನ ಹಣ ಕೊಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಪ್ರಯತ್ನ ಮಾಡಿಲ್ಲ ಜತೆಗೆ ಜಿಲ್ಲಾಡಳಿತ ತಾಲೂಕು ಆಡಳಿತ ಕಬ್ಬಿನ ಬಾಕಿ ಹಣ ಕೊಡಿಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಅಜ್ಜಹಳ್ಳಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣಾ ಪ್ರಚಾರ ಮಾಡುವ ಸಂದರ್ಭದಲ್ಲಿ ರೈತನೊಬ್ಬ ಕಬ್ಬಿನ ಬಾಕಿ ಹಣ ಕೊಡಿಸಲು ಕೇಳಿದಾಗ. ಕೆಲ ಮುಖಂಡರು ರೈತರ ಹಲ್ಲೆ ಮಾಡಿ, ದೌರ್ಜನ್ಯ ಮಾಡಿದ್ದಾರೆ. ಇದು ಖಂಡನೀಯ. ರೈತನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ. ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಕೊಟ್ಟಿಗೆ ಪುಟ್ಟಸ್ವಾಮಿ, ತಾಲೂಕು ಉಪಾಧ್ಯಕ್ಷ ಕೆ.ಕುಬೇರ, ಮುಖಂಡರಾದ ಲಿಂಗಯ್ಯ, ರಾಜಣ್ಣ, ನಾಗೇಶ್, ಗಣೇಶ್‍ಕುಮಾರ್, ಅರವಿಂದ್, ನಾಗೇಶ್, ರಮೇಶ್, ನಾಗೇಗೌಡ, ರಮೇಶ್ ಹಾಗೂ ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.