ಮಂಡ್ಯದಲ್ಲಿ ಅನಧಿಕೃತ ಗಣಿಗಾರಿಕೆ ನಿಯಂತ್ರಣಕ್ಕೆ ಚೆಕ್‍ಪೋಸ್ಟ್

ಮಂಡ್ಯದಲ್ಲಿ ಅನಧಿಕೃತ ಗಣಿಗಾರಿಕೆ ನಿಯಂತ್ರಣಕ್ಕೆ ಚೆಕ್‍ಪೋಸ್ಟ್

LK   ¦    Oct 11, 2018 08:12:32 PM (IST)
ಮಂಡ್ಯದಲ್ಲಿ ಅನಧಿಕೃತ ಗಣಿಗಾರಿಕೆ ನಿಯಂತ್ರಣಕ್ಕೆ ಚೆಕ್‍ಪೋಸ್ಟ್

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ನಿಯಂತ್ರಿಸಲು ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಸ್ಥಳಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.

ಪಾಂಡವಪುರ ತಾಲ್ಲೂಕಿನಲ್ಲಿ ಪಿಎಸ್‍ಎಸ್ ಹತ್ತಿರ, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಾರಿಗೆ ಇಲಾಖೆಯ ಬಳಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಪೊಲೀಸ್ ಠಾಣೆ ಪಕ್ಕದಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು. ಚೆಕ್‍ಪೋಸ್ಟ್ ಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಕಂದಾಯ, ಪೊಲೀಸ್, ಅರಣ್ಯ, ಸಾರಿಗೆ, ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಅಕ್ರಮ ಗಣಿಗಾರಿಕೆ, ಬ್ಲಾಸ್ಟಿಂಗ್ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಪಾಂಡವಪುರ ಉಪ ವಿಭಾಗ ವ್ಯಾಪ್ತಿಯಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಒಂದು ತಂಡ ಸೇರಿದಂತೆ, ಶ್ರೀರಂಗಪಟ್ಟಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶ್ರೀರಂಗಪಟ್ಟಣ ತಹಸೀಲ್ದಾರ್ ನೇತೃತ್ವದಲ್ಲಿ ಹಾಗೂ ಪಾಂಡವಪುರ ತಾಲೂಕಿನ ವ್ಯಾಪ್ತಿಯಲ್ಲಿ ಪಾಂಡವಪುರ ತಹಶೀಲ್ದಾರ್ ನೇತೃತ್ವದಲ್ಲಿ ಮೂರು ಪ್ರತ್ಯೇಕಾ ತಂಡಗಳನ್ನು ರಚಿಸಲಾಗಿದೆ. ಪಾಂಡವಪುರ ಉಪ ವಿಭಾಗ ವ್ಯಾಪ್ತಿಯ ತಂಡದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ತಂಡದ ಅಧ್ಯಕ್ಷರಾಗಿದ್ದು, ಶ್ರೀರಂಗಪಟ್ಟಣ ಪೊಲೀಸ್ ಉಪ ಅಧೀಕ್ಷರು, ಮಂಡ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಹಾಗೂ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಪಾಂಡವಪುರ ತಾಲೂಕು ವ್ಯಾಪ್ತಿಯ ತಂಡದಲ್ಲಿ ಪಾಂಡವಪುರ ತಹಸೀಲ್ದಾರ್ ತಂಡದ ಅಧ್ಯಕ್ಷರಾಗಿದ್ದು, ಪಾಂಡವಪುರ ವೃತ್ತ ಆರಕ್ಷಕ ನಿರೀಕ್ಷರು, ಪಾಂಡವಪುರ ವಲಯ ಅರಣ್ಯಾಧಿಕಾರಿಗಳು, ಪಾಂಡವಪುರ ತಾಲೂಕು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಹಾಗೂ ಪಾಂಡವಪುರದ ಸಾರಿಗೆ ಇಲಾಖೆಯ ಸಾರಿಗೆ ನಿರೀಕ್ಷಕರು ತಂಡದ ಸದಸ್ಯರುಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ತಂಡದಲ್ಲಿ ಶ್ರೀರಂಗಪಟ್ಟಣ ತಹಸೀಲ್ದಾರ್, ಶ್ರೀರಂಗಪಟ್ಟಣ ವೃತ್ತ ಆರಕ್ಷಕ ನಿರೀಕ್ಷರು, ಶ್ರೀರಂಗಪಟ್ಟಣ ವಲಯ ಅರಣ್ಯಾಧಿಕಾರಿ ಹಾಗೂ ಶ್ರೀರಂಗಪಟ್ಟಣ ಸಾರಿಗೆ ಇಲಾಖೆಯ ಸಾರಿಗೆ ನಿರೀಕ್ಷಕರು ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.