ಜನವಸತಿ ಪ್ರದೇಶದಲ್ಲಿ ಟವರ್ ಅಳವಡಿಕೆಗೆ ನ್ಯಾಯಾಲಯ ತಡೆ

ಜನವಸತಿ ಪ್ರದೇಶದಲ್ಲಿ ಟವರ್ ಅಳವಡಿಕೆಗೆ ನ್ಯಾಯಾಲಯ ತಡೆ

LK   ¦    Oct 12, 2017 03:04:44 PM (IST)
ಜನವಸತಿ ಪ್ರದೇಶದಲ್ಲಿ ಟವರ್ ಅಳವಡಿಕೆಗೆ ನ್ಯಾಯಾಲಯ ತಡೆ

ಮೈಸೂರು: ನಗರದ ಗೋಕುಲಂ 3ನೇ ಹಂತದಲ್ಲಿ ತಲೆಯೆತ್ತಿದ ಮೊಬೈಲ್ ಟವರನ್ನು ಜಾರಿಗೊಳಿಸದಂತೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಗೋಕುಲಂ 3ನೇ ಹಂತದ 4ನೇ ಮುಖ್ಯರಸ್ತೆಯಲ್ಲಿನ 111ನೇ ಮನೆಯ 4ನೇ ಮಹಡಿಯ ಮೇಲೆ ರಿಲಾಯನ್ಸ್ ಟೆಲಿಕಾಂ ಕಂಪೆನಿ ಕಟ್ಟುತ್ತಿರುವ ಮೊಬೈಲ್ ಟವರ್ ಜಾರಿಗೊಳಿಸದಿರಲು ನೆರೆಹೊರೆಯವರು ನ್ಯಾಯಾಲಯದ ಮೊರೆ ಹೋಗಿದ್ದರು. ದಾವೆಯನ್ನು ಆಲಿಸಿದ 2ನೇ ಅಪರ ಪ್ರಥಮ ಸಿವಿಲ್ ನ್ಯಾಯಾಧೀಶರು ಮೊಬೈಲ್ ಟವರನ್ನು ಜಾರಿ ಮಾಡದಂತೆ ರಿಲಾಯನ್ಸ್ ಕಂಪೆನಿಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ವಕೀಲ ಪಿ.ಪಿ.ಬಾಬುರಾಜ್ ವಾದಿಗಳ ಪರವಾಗಿ ವಕಾಲತ್ತು ವಹಿಸಿದರು.

ಮನೆಯ ಮಾಲಿಕ ವೆಂಕಟೇಗೌಡ ಅಲ್ಲದೆ ರಿಲಾಯನ್ಸ್ ಕಂಪನಿಯ ಬೆಂಗಳೂರು ಮತ್ತು ಮೈಸೂರು ಕಚೇರಿಗಳು, ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತ ಮತ್ತು ವಲಯ ಆಯುಕ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ವಿದ್ಯುತ್ ಸರಬರಾಜು ಕಂಪೆನಿ (ಚೆಸ್ಕಾಂ) ಇವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಜನದಟ್ಟಣೆಯಿರುವ ಗೋಕುಲಂನಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದರಿಂದ ಸುತ್ತಮುತ್ತ ವಾಸಿಸುವವರಿಗೆ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ ಎಂಬ ಆತಂಕ ಸ್ಥಳೀಯರಲ್ಲಿವೆ. ಇದನ್ನು ಮನೆಮಾಲಿಕರಾದ ವೆಂಕಟೇಗೌಡರ ಗಮನಕ್ಕೆ ತಂದರೂ ಅವರು ಅದಕ್ಕೆ ಬೆಲೆ ಕೊಡಲಿಲ್ಲ. ಸುತ್ತಮುತ್ತಲಿನವರ ನಿರಾಕ್ಷೇಪಣೆ ಪಡೆಯಲು ಕಂಪೆನಿಯೂ ತಯಾರಿರಲಿಲ್ಲ. ಪ್ರತಿಭಟನೆಯ ನಡುವೆಯೂ ಮೊಬೈಲ್ ಟವರ್ ನಾಲ್ಕನೆಯ ಮಹಡಿ ಮೇಲೆ ತಲೆ ಎತ್ತಿತ್ತು.

ನಗರಪಾಲಿಕೆ ಆಯುಕ್ತರಿಗೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದ ನಂತರ ಟವರ್ ತೆರವುಗೊಳಿಸುವಂತೆ ವಲಯ ಆಯುಕ್ತರು ಮನೆ ಮಾಲಿಕರಿಗೆ ಮೂರು ಬಾರಿ ನೊಟೀಸ್ ಜಾರಿಗೊಳಿಸಿದರು. ಇದರ ನಂತರ ಪಾಲಿಕೆಯೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೊಬೈಲ್ ಟವರನ್ನು ಜಾರಿಗೊಳಿಸಲು ಮಧ್ಯರಾತ್ರಿಯಲ್ಲಿ ಎರಡು ಬಾರಿ ಬಂದ ರಿಲಾಯನ್ಸ್ ಅಧಿಕಾರಿಗಳನ್ನು ಸ್ಥಳೀಯ ನಿವಾಸಿಗಳು ತಡೆದು ನಿಲ್ಲಿಸಿದ್ದರು. ಪಾಲಿಕೆ ಪರವಾನಗಿ ಅಥವಾ ಸ್ಥಳೀಯರ ನಿರಾಪೇಕ್ಷಣೆ ಇಲ್ಲದೆ 30-35 ವರ್ಷದ ಹಳೆಯ ಕಟ್ಟಡದ ಮೇಲೆ ಮೊಬೈಲ್ ಟವರ್ ಕಟ್ಟುತ್ತಿರುವುದು ಆತಂಕಕಾರಿ ಎನ್ನುವುದು ಸ್ಥಳೀಯ ನಿವಾಸಿಗಳ ವಾದ. ಸದ್ಯ ನ್ಯಾಯಾಲಯ ಟವರ್ ನಿರ್ಮಾಣ ಮಾಡದಂತೆ ಆದೇಶ ನೀಡಿರುವುದರಿಂದ ಸ್ಥಳೀಯ ನಿವಾಸಿಗಳು ನೆಮ್ಮದಿಯುಸಿರು ಬಿಟ್ಟಿದ್ದಾರೆ.

More Images