ದಸರಾಗೆ ಅವಶ್ಯಕತೆ ತಕ್ಕಂತೆ  ಬಸ್ ವ್ಯವಸ್ಥೆ: ಲಕ್ಷ್ಮಣ್ ಸವದಿ  

ದಸರಾಗೆ ಅವಶ್ಯಕತೆ ತಕ್ಕಂತೆ  ಬಸ್ ವ್ಯವಸ್ಥೆ: ಲಕ್ಷ್ಮಣ್ ಸವದಿ  

LK   ¦    Sep 08, 2019 08:10:03 PM (IST)
ದಸರಾಗೆ ಅವಶ್ಯಕತೆ ತಕ್ಕಂತೆ  ಬಸ್ ವ್ಯವಸ್ಥೆ: ಲಕ್ಷ್ಮಣ್ ಸವದಿ   

ಮೈಸೂರು: ವಸತಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ದಸರಾಗೆ ಹೆಚ್ಚು ಬಸ್ ಕೇಳಿದ್ದು, ಅವಶ್ಯಕತೆ ಇರುವಷ್ಟು  ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಹೇಳಿದರು. 

ಭಾನುವಾರ ನಂಜನಗೂಡು ತಾಲ್ಲೂಕಿನ ಸುತ್ತೂರಿನ ಗದ್ದುಗೆಯಲ್ಲಿ ಶ್ರೀ ಶಿವರಾತ್ರಿಶ್ವರ ದೇವರ ದರ್ಶನವನ್ನು ಪಡೆದು ಉಪಮುಖ್ಯಮಂತ್ರಿಯವರು ಮಾತನಾಡಿದರು. ಉಪಮುಖ್ಯ ಮಂತ್ರಿ ಆದ ಬಳಿಕ ಪ್ರಥಮಬಾರಿಗೆ ಮೈಸೂರಿಗೆ ಆಗಮಿಸಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದೇನೆ. ಸಾರಿಗೆ ಇಲಾಖೆಯ ಅಧಿಕಾರವನ್ನು ವಹಿಸಿಕೊಂಡಿದ್ದು, ಶ್ರದ್ಧೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.

 ರಾಜ್ಯದಲ್ಲಿ ಮತ್ತೆ ಎರಡು ಡಿಸಿಎಂ ಹುದ್ದೆ ಸೃಷ್ಟಿ ಕುರಿತು ಮಾಹಿತಿ ಇಲ್ಲ. ಈ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವ ಪರಮಾಧಿಕಾರ ಮುಖ್ಯಮಂತ್ರಿಗಳಿಗೆ ಇದ್ದು ಅವರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. 

ಸಹಜವಾಗಿ ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆ. ಹೀಗಾಗಿ ಪ್ರಾರಂಭದಲ್ಲಿ ರಾಜ್ಯ ಸರ್ಕಾರದಲ್ಲಿ ಗೊಂದಲವಿತ್ತು. ಈಗ ಎಲ್ಲವೂ ಸರಿಯಾಗಿದೆ ಎಂದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಸುಪ್ರಿಂ ಕೋರ್ಟ್‍ನಲ್ಲಿ ಇದ್ದು, ತೀರ್ಪು ಬಂದ ಬಳಿಕ ಅತೃಪ್ತ ಶಾಸಕರು ಕೈಗೊಳ್ಳುವ ನಿರ್ಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದರು. 

ಕರ್ನಾಟಕದಲ್ಲಿ ಇಂಧನ ಉಳಿತಾಂಶ ಮಾಡಲು ಎಲೆಕ್ಟ್ರಿಕಲ್ ಬಸ್ ಸಂಚಾರ ವ್ಯವಸ್ಥೆ ಜಾರಿಗೆ ತರುವ ಕುರಿತು ಆಲೋಚನೆಇದೆ. ಇದಕ್ಕೆ ಸಂಬಂಧಿಸಿದಂತೆಹೊರ ದೇಶಗಳಿಂದ ಪ್ರಸ್ತಾವನೆಗಳು ಬಂದಿದೆ. ಅದರ ಸಾಧಕಬಾಧಕ ಕುರಿತು ಸಮಾಲೋಚಿಸಲಾಗುತ್ತಿದೆ ಎಂದರು. ಶೂನ್ಯ ಬಂಡವಾಳ ಹೂಡಿಕೆ  ಮಾಡಿ ಶೇ.40:60ರ ಅನುಪಾತದಲ್ಲಿ ಆದಾಯ ನಮಗೆ ಕೊಡುತ್ತಾರೆ. ಬಸ್‍ಗಳನ್ನ ಅವರೇ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಾರೆ. ಈಗಾಗಲೇ ಹಲವು ಬಾರಿ ನಮ್ಮ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಮತ್ತೆ ಚರ್ಚೆ ಮಾಡಲಾಗುತ್ತದೆ ಎಂದರು. ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ಇಂತಹ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಮೊದಲು ಆಸ್ಸಾಂನಲ್ಲಿ ಜಾರಿಗೆ ಬರಲಿದೆ. ಅದನ್ನು ನಾವು ಪರಿಗಣಿಸಿ ಯಾವ ರೀತಿ ಪ್ರಯೋಜನವಾಗಲಿದೆ ಎನ್ನುವುದನ್ನು ನೋಡಿಕೊಂಡು ನಮ್ಮಲ್ಲೂ ಜಾರಿ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು. ತೈಲ ಬೆಲೆ ಹೆಚ್ಚಳದಿಂದಾಗಿ ಬಸ್ ದರ ಏರಿಸುವ ಕುರಿತ ಪ್ರಸ್ತಾವನೆ ನನ್ನ ಮುಂದಿದ್ದರೂ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡುವ ಉದ್ದೇಶ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಮಾಡುತ್ತೇನೆ ಎಂದರು. 

ಮಹಾರಾಷ್ಟ್ರದಲ್ಲಿ ಚುನಾವಣೆ ವಿಚಾರದಲ್ಲಿ ನನಗೆ ಪಶ್ಚಿಮ ಮಹಾರಾಷ್ಟ್ರದ ಜವಾಬ್ದಾರಿ ನೀಡಲಾಗಿದೆ.6 ರಿಂದ 7 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ ಎಂದರಲ್ಲದೆ  ಪ್ರತಿಪಕ್ಷಗಳ ಟೀಕೆ ವಿಚಾರ ಪ್ರಸ್ತಾಪಿಸಿದ ಸವದಿ, ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಅವರು ಮಾತನಾಡುತ್ತಾರೆ. ನಾನು ಈ ಬಗ್ಗೆ ಯಾವ ಪ್ರತಿಕ್ರಿಯೆ ಕೊಡಲ್ಲ. ವಿಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಭಿನ್ನಾಭಿಪ್ರಾಯ ಇಲ್ಲವೇ ಇಲ್ಲ ಎಂದರು.

 ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಬ್ರೇಕ್ ಹಾಕಲಾಗಿದೆ ಎಂದಿರುವ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪಕ್ಕೆ ಹಾರಿಕೆ ಉತ್ತರ ನೀಡಿದರು. ಸಾ.ರಾ.ಮಹೇಶ್ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ವಿಷಯ ತಿಳಿದು ಮಾತನಾಡುವೆ ಎಂದರು.