ಬೆಂಕಿಗಾಹುತಿಯಾದ ಗುಡಿಸಲು: ವೃದ್ಧೆ ಪಾರು

ಬೆಂಕಿಗಾಹುತಿಯಾದ ಗುಡಿಸಲು: ವೃದ್ಧೆ ಪಾರು

LK   ¦    Mar 10, 2018 07:27:22 PM (IST)
ಬೆಂಕಿಗಾಹುತಿಯಾದ ಗುಡಿಸಲು: ವೃದ್ಧೆ ಪಾರು

ಮಂಡ್ಯ: ಆಕಸ್ಮಿಕ ಬೆಂಕಿಬಿದ್ದು ಗುಡಿಸಲು ಸಂಪೂರ್ಣ ಭಸ್ಮವಾಗಿ, ಮನೆಯಲ್ಲಿದ್ದ ವೃದ್ಧೆಯನ್ನು ಗ್ರಾಮಸ್ಥರು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದಿದೆ.

ನಿಂಗಮ್ಮ (85) ಅವರಿಗೆ ಸೇರಿದ ಗುಡಿಸಲು ಬೆಂಕಿಗಾಹುತಿಯಾಗಿದ್ದು, ಮನೆಯಲ್ಲಿದ್ದ ಅಕ್ಕಿ, ರಾಗಿ, ಬಟ್ಟೆ, 5 ಸಾವಿರ ರೂ., ಇತರೆ ಗೃಹೋಪಯೋಗಿ ಪದಾರ್ಥಗಳು ಸಂಪೂರ್ಣ ಸುಟ್ಟುಹೋಗಿವೆ.

ಬೆಳಗಿನ ಜಾವ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದಿದ್ದು, ವೃದ್ಧೆಯ ಕಿರುಚಾಟ ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಯತ್ನ ನಡೆಸಿದ್ದಲ್ಲದೆ, ಬೆಂಕಿಯಲ್ಲಿ ಸಿಲುಕಿಕೊಂಡಿದ್ದ ಆಕೆಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು.

ಸುದ್ದಿ ತಿಳಿದ ಅಗ್ನಿಶಾಮಕ ದಳದವರು ಆಗಮಿಸುವ ವೇಳೆಗೆ ಗುಡಿಸಲು ಸಂಪೂರ್ಣ ಭಸ್ಮವಾಗಿತ್ತು. ಆದರೆ ಬೆಂಕಿ ಇತರೆ ಮನೆಗಳಿಗೆ ಹರಡುವುದನ್ನು ತಪ್ಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಅನುಪಮ ಕುಮಾರಿ ಹಾಗೂ ಯುವ ಮುಖಂಡ ಯೋಗೇಶ್ ವೃದ್ಧೆಗೆ ಸಾಂತ್ವನ ಹೇಳಿದರಲ್ಲದೆ, ಸಂಬಂಧಿಸಿದ ಇಲಾಖೆಯಿಂದ ದೊರೆಯುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ಇತರ ಮುಖಂಡರು ಸ್ಥಳಕ್ಕೆ ಭೇಟಿ ನೀಡಿದ್ದರು.

ವೃದ್ಧೆ ನಿಂಗಮ್ಮ ಏಕಾಂಗಿಯಾಗಿ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದು, ಈಗ ಬೀದಿಗೆ ಬಿದ್ದಿದ್ದಾಳೆ. ಅನ್ನಭಾಗ್ಯ ಯೋಜನೆ ಅಕ್ಕಿ ಹಾಗೂ ಪರ ಊರಿಗೆ ಮದುವೆಯಾಗಿರುವ ಹೆಣ್ಣು ಮಕ್ಕಳು ಕೊಡುವ ಅಲ್ಪಸ್ವಲ್ಪ ಧನಸಹಾಯವೇ ಆಕೆಗೆ ಆಸರೆಯಾಗಿದ್ದವು.

More Images