ಟ್ರಾಫಿಕ್ ಪೊಲೀಸ್ ಸಮವಸ್ತ್ರದಲ್ಲಿ ಪ್ರತಿಭಟಿಸಿದ ವಾಟಾಳ್

ಟ್ರಾಫಿಕ್ ಪೊಲೀಸ್ ಸಮವಸ್ತ್ರದಲ್ಲಿ ಪ್ರತಿಭಟಿಸಿದ ವಾಟಾಳ್

LK   ¦    Sep 09, 2019 11:24:40 AM (IST)
ಟ್ರಾಫಿಕ್ ಪೊಲೀಸ್ ಸಮವಸ್ತ್ರದಲ್ಲಿ ಪ್ರತಿಭಟಿಸಿದ ವಾಟಾಳ್

ಮೈಸೂರು: ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಟ್ರಾಫಿಕ್ ಪೊಲೀಸ್ ಸಮವಸ್ತ್ರ ಧರಿಸಿ ಮೈಸೂರಿನ ರೈಲ್ವೆ ನಿಲ್ದಾಣದ ವೃತ್ತದ ಬಳಿ ಪ್ರತಿಭಟನೆ ಮಾಡುವ ಮೂಲಕ  ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ವಾಹನ ಸವಾರರಿಗೆ ಹೆಚ್ಚಿನ ದಂಡ ಹೆಚ್ಚಿಸಿದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಟ್ರಾಫಿಕ್ ಪೊಲೀಸ್ ಸಮವಸ್ತ್ರ ಧರಿಸಿ ಆಗಮಿಸಿದ ಅವರು ವಾಹನ ಸವಾರರನ್ನು ತಪಾಸಣೆ ನಡೆಸುವ ಮೂಲಕ ವಿನೂತನವಾಗಿ ದಂಡ ಹೆಚ್ಚಳದ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ವಾಹನ ಸವಾರರನ್ನು ತಡೆದು ನಿಲ್ಲಿಸಿ, ವಾಹನದ ದಾಖಲೆ ಪರಿಶೀಲಿಸಿದಂತೆ ನಟಿಸಿದರು. ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಂದ್ರ ಸರ್ಕಾರ ಯಾವುದೇ ಹೊಸ ನಿಯಮ ಜಾರಿಗೊಳಿಸುವ ಮುನ್ನ ಚರ್ಚೆ ಮಾಡದೆ ಏಕಾಏಕಿ ಕಾಯ್ದೆಯನ್ನು ಜಾರಿಮಾಡಿದೆ. ಪರಿಣಾಮ ಮೋಟಾರು ವಾಹನ ತೆರಿಗೆ ಜನರಿಗೆ ಯಮ ಪಾಶವಾಗಿದೆ. ಹೆಚ್ಚಿನ ದಂಡ ವಸೂಲಿ ಮಾಡುವುದು ಒಂದು ದಂಧೆಯಾಗಿದೆ. ಇದೊಂದು ಅವೈಜ್ಞಾನಿಕ ಕ್ರಮವಾಗಿದ್ದು, ಒಂದಕ್ಕೆ ಹತ್ತರಷ್ಟು ಶುಲ್ಕ ಏರಿಸಿ ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಭಯ ಮೂಡಿಸಿದೆ ಎಂದು ಆಕ್ರೋಶ ಹೊರ ಹಾಕಿದರು.

ಹೊಸ ನೀತಿಯಿಂದಾಗಿ ದ್ವಿಚಕ್ರವಾಹನ ಸವಾರರು ಮನೆಯಿಂದ ಗಾಡಿ ಹೊರತೆಗೆಯುವುದಕ್ಕೆ ಭಯಪಡುವಂತಾಗಿದೆ. ಸರ್ಕಾರ ಈ ಕೂಡಲೇ ಎಚ್ಚೆತ್ತು ಕಾಯಿದೆಯನ್ನು ಹಿಂಪಡೆಯಬೇಕು  ಎಂದು ಇದೇ ವೇಳೆ ಆಗ್ರಹಿಸಿದರು.