ಮೈಸೂರು: ಅಪೇ ಆಟೋ ಹಾಗೂ ಬೈಕ್ ನಡುವೆ ಮಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿ, ಎಂಟು ಮಂದಿ ಮಹಿಳೆಯರು ಹಾಗೂ ಪುರಷನೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಹೆಳವರಹುಂಡಿ ಬಳಿ ನಡೆದಿದೆ.
ಘಟನೆಯಲ್ಲಿ ನಂಜನಗೂಡು ತಾಲ್ಲೂಕಿನ ಜೀಮಾರಹಳ್ಳಿ ಗ್ರಾಮದ ಗೀತಾ(29) ಸಾವನ್ನಪ್ಪಿದ್ದು, ಅದೇ ಗ್ರಾಮದ ಮಣಿ,ನಾಗರತ್ನ, ಸುಮ, ಉಷಾ, ರಂಜಿತ ಹಾಗೂ ಬೈಕ್ ನಲ್ಲಿದ್ದ ಬೆನಕನಹಳ್ಳಿ ಗ್ರಾಮದ ದಂಪತಿಗೆ ಗಂಭೀರ ಗಾಯಗಳಾಗಿವೆ.
ಜೀಮಾರಹಳ್ಳಿ ಗ್ರಾಮದ ಸುಮಾರು 12 ಜನ ಮಹಿಳೆಯರು ಎಂದಿನಂತೆ ತಾಲೂಕಿನ ಚೌಹಳ್ಳಿ ಬಳಿ ಇರುವ ಸಾಯಿ ಗಾರ್ಮೆಂಟ್ಸ್ ಗೆ ಕೆಲಸಕ್ಕೆಂದು ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಹೆಳವರಹುಂಡಿ ಬಳಿ ಎದುರಿಗೆ ಬಂದ ಬೈಕ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿನ ಹಳ್ಳಕ್ಕೆ ಉರುಳಿದೆ. ಪರಿಣಾಮ ಆಟೋದಲ್ಲಿದ್ದ 12 ಮಹಿಳೆಯರ ಪೈಕಿ ಪುರುಷ ಸೇರಿದಂತೆ 9 ಮಂದಿ ಗಂಭೀರ ಗಾಯಗೊಂಡಿದ್ದು, ಎಲ್ಲರನ್ನೂ ತಿ.ನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಇದರಲ್ಲಿ ಗಂಭೀರ ಗಾಯಗೊಂಡ ಬೆನಕನಹಳ್ಳಿ ಗ್ರಾಮದ ಬೈಕ್ ಸವಾರರಾದ ಕುಮಾರ್ ಮತ್ತು ದೇವಿಕ ದಂಪತಿ ಹಾಗೂ ಅಟೋದಲ್ಲಿದ್ದ ಗೀತಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಗೀತಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಆಟೋ ಚಾಲಕ ನಾಪತ್ತೆಯಾಗಿದ್ದು, ಆಟೋದವನ ಅತಿವೇಗ ಹಾಗೂ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.