ನಂಜನಗೂಡಿನ ತ್ಯಾಜ್ಯದಿಂದ ಅಶುದ್ಧವಾಗುತ್ತಿರುವ ಕಪಿಲ ನದಿ

ನಂಜನಗೂಡಿನ ತ್ಯಾಜ್ಯದಿಂದ ಅಶುದ್ಧವಾಗುತ್ತಿರುವ ಕಪಿಲ ನದಿ

LK   ¦    Jun 13, 2018 04:21:12 PM (IST)
ನಂಜನಗೂಡಿನ ತ್ಯಾಜ್ಯದಿಂದ ಅಶುದ್ಧವಾಗುತ್ತಿರುವ ಕಪಿಲ ನದಿ

ಮೈಸೂರು: ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ನಂಜುಂಡೇಶ್ವರ ದೇಗುಲದ ಮುಂದೆ ಹರಿಯುವ ಕಪಿಲ ನದಿ ತಲತಲಾಂತರದಿಂದ ಭಕ್ತರ ಪಾಪ ಕಳೆಯುತ್ತಾ ಬಂದಿದ್ದು, ಆದರೆ ಇತ್ತೀಚೆಗೆ ಈ ನದಿಯೇ ಕಲ್ಮಶವಾಗುವತ್ತ ಸಾಗುತ್ತಿದೆ. ಇದಕ್ಕೆ ಕಾರಣ ನಂಜನಗೂಡು ಪಟ್ಟಣದ ತ್ಯಾಜ್ಯ ನದಿಗೆ ಸೇರುತ್ತಿರುವುದೇ ಆಗಿದೆ.

ಹಾಗೆ ನೋಡಿದರೆ ಇಲ್ಲಿಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರು ದೇಗುಲದ ಮುಂಭಾಗದಲ್ಲಿ ಹರಿಯುವ ಕಪಿಲ ನದಿಯಲ್ಲಿ ಸ್ನಾನ ಮಾಡಿ ಪಾಪ ಕಳೆಯಿತೆಂದು ನಂಬುತ್ತಾರೆ. ಆದರೆ ಕಪಿಲ ನದಿಗೆ ಸೇರುತ್ತಿರುವ ತ್ಯಾಜ್ಯವನ್ನು ನೋಡಿದರೆ ಖಂಡಿತಾ ಭಕ್ತರು ಬೆಚ್ಚಿ ಬೀಳುವುದಂತು ಸತ್ಯ. ಕಪಿಲ ನದಿಗೆ ಪಟ್ಟಣದ ಕಲುಷಿತ ನೀರು ಹರಿದು ಬರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಿಕ್ಕ ವಸ್ತು, ಬಟ್ಟೆಗಳನ್ನು ಎಸೆಯುವುದು ಕಂಡು ಬರುತ್ತಿದೆ. ಇದೆಲ್ಲದರ ಪರಿಣಾಮ ಕಪಿಲ ನದಿ ಕಲುಷಿತವಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಈ ಬಾರಿ ವೈನಾಡಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮತ್ತು ನಂಜನಗೂಡು ವ್ಯಾಪ್ತಿಯಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದಿದ್ದೇ ಆದರೆ ಕಲ್ಮಶವೆಲ್ಲ ತೊಳೆದು ಹೋಗುವ ಸಾಧ್ಯತೆಯಿದೆ. ಜತೆಗೆ ನಂಜನಗೂಡು ಪಟ್ಟಣ ಸೇರಿದಂತೆ ಫ್ಯಾಕ್ಟರಿಗಳ ತ್ಯಾಜ್ಯವೂ ಇಲ್ಲಿಗೆ ಸೇರುವುದರಿಂದಾಗಿ ನದಿ ಕಲುಷಿತವಾಗುತ್ತಿದೆ.

ಇನ್ನು ಲಕ್ಷಾಂತರ ಜನ ಇಲ್ಲಿಗೆ ಭೇಟಿ ನೀಡಿ ಪೂಜಾಕೈಂಕರ್ಯ ಮಾಡುವುದರೊಂದಿಗೆ ತಾವು ತಂದ ಪದಾರ್ಥಗಳನ್ನೆಲ್ಲ ನದಿಗೆ ಎಸೆಯುತ್ತಾರೆ. ಹೀಗೆ ಎಸೆದ ವಸ್ತುಗಳು ನದಿಯಲ್ಲಿ ಶೇಖರಣೆಯಾಗಿ ನದಿ ಕಲುಷಿತಗೊಳ್ಳುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.