ಡಬ್ಲಿಂಗ್ ಗ್ಯಾಂಗ್ ಮೇಲೆ ಫೈರಿಂಗ್: ಓರ್ವ ಸಾವು

ಡಬ್ಲಿಂಗ್ ಗ್ಯಾಂಗ್ ಮೇಲೆ ಫೈರಿಂಗ್: ಓರ್ವ ಸಾವು

May 16, 2019 03:38:41 PM (IST)
ಡಬ್ಲಿಂಗ್ ಗ್ಯಾಂಗ್ ಮೇಲೆ ಫೈರಿಂಗ್: ಓರ್ವ ಸಾವು

ಮೈಸೂರು: ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದ ತಂಡದ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಫೈರಿಂಗ್ ಮಾಡಿದ ಘಟನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಈ ವೇಳೆ ಪೊಲೀಸರು ಮರು ಫೈರಿಂಗ್ ಮಾಡಿದ್ದರಿಂದ ಗ್ಯಾಂಗ್ ನಲ್ಲಿದ್ದ ವ್ಯಕ್ತಿಯೊಬ್ಬ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಕೆಲವು ಸಮಯಗಳ ಹಿಂದೆ ಮುಂಬೈನಿಂದ ಬಂದು ಮೈಸೂರಿನ ವಿಜಯನಗರದಲ್ಲಿ ನೆಲೆಯೂರಿದ ಗ್ಯಾಂಗ್ ಹಣ ದುಪ್ಪಟ್ಟು ಮಾಡುವ ಡಬ್ಲಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ವಿಜಯನಗರ ಪೊಲೀಸ್ ಠಾಣೆಗೆ ಬಂದಿತ್ತು. ಹೀಗಾಗಿ ಇನ್ಸ್ ಪೆಕ್ಟರ್ ಕುಮಾರ್ ಅವರು ಸಿಬ್ಬಂದಿಯೊಂದಿಗೆ ಗ್ಯಾಂಗ್ ಮೇಲೆ ದಾಳಿ ಮಾಡಿತ್ತು. ಈ ಸಂದರ್ಭ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದ ಗ್ಯಾಂಗ್‍ನಲ್ಲಿದ್ದವನೊಬ್ಬ ಇನ್ಸ್ ಪೆಕ್ಟರ್ ಬಳಿಯಿದ್ದ ಗನ್ ಕಸಿದು ಅವರ ಮೇಲೆಯೇ ಫೈರಿಂಗ್ ಮಾಡಲು ಯತ್ನಿಸಿದ್ದ ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದರು ಎನ್ನಲಾಗಿದ್ದು ಆದು ಆತನಿಗೆ ತಾಗಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಸದ್ಯಕ್ಕೆ ಸಾವನ್ನಪ್ಪಿದ ವ್ಯಕ್ತಿ ಯಾರು? ಆತ ಎಲ್ಲಿಯವನು? ಎಂಬುದರ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿಯಬೇಕಿದೆ. ಈ ಘಟನೆಯಲ್ಲಿ ಜತೆಗಿದ್ದ ಪೊಲೀಸರಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.