ಸೊಳ್ಳೆ ಕಾಟದಿಂದ ಜ್ವರಬಂದು ಆಸ್ಪತ್ರೆ ಸೇರಿದ ಪೊಲೀಸರು

ಸೊಳ್ಳೆ ಕಾಟದಿಂದ ಜ್ವರಬಂದು ಆಸ್ಪತ್ರೆ ಸೇರಿದ ಪೊಲೀಸರು

MH   ¦    Nov 14, 2017 07:04:33 PM (IST)
ಸೊಳ್ಳೆ ಕಾಟದಿಂದ ಜ್ವರಬಂದು ಆಸ್ಪತ್ರೆ ಸೇರಿದ ಪೊಲೀಸರು

ಮೈಸೂರು: ಸೊಳ್ಳೆಕಾಟದಿಂದ ಪೊಲೀಸ್ ಠಾಣೆಯ 6 ಜನ ಪೊಲೀಸರು ತೀವ್ರ ಜ್ವರದಿಂದ ಬಳಲುತ್ತಿರುವ ಘಟನೆಯೊಂದು ನಗರದ ಲಕ್ಷ್ಮೀಪುರಂ ಠಾಣೆಯಲ್ಲಿ ನಡೆದಿದೆ.

ನಗರದ ಲಕ್ಷ್ಮೀಪುರಂ ಪೊಲೀಸ್ ಠಾಣೆ ಹಿಂಭಾಗವಿರುವ ಶೌಚಾಲಯದ ಯುಜಿಡಿ ಪೈಪ್ ಒಡೆದು ಕಳೆದ ಮೂರು ತಿಂಗಳಿನಿಂದ ಪೊಲೀಸ್ ಠಾಣೆಯಲ್ಲಿ ಸೊಳ್ಳೆಗಳು ಹೆಚ್ಚಾಗಿವೆ.
ಯುಜಿಡಿ ಪೈಪ್ ಒಡೆದು ನೀರು ಹೊರಬರುತ್ತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸೊಳ್ಳೆಗಳು ಸಂಜೆ ಹೊತ್ತು ಪೊಲೀಸ್ ಠಾಣೆಯತ್ತ ಹೆಚ್ಚಾಗಿ ಬರುವುದರಿಂದ ಸೊಳ್ಳೆಕಾಟದಿಂದ ಲಕ್ಷ್ಮೀಪುರಂ ಇನ್ಸ್ ಪೆಕ್ಟರ್ ರಘು, ಎಎಸ್ ಐಗಳಾದ ಪ್ರಭುದೇವ್, ಮರಿಸ್ವಾಮಿ, ಪ್ರಸನ್ನ ಮೂರ್ತಿ, ಹೆಡ್ ಕಾನ್ಸಟೇಬಲ್ ಬಸವರಾಜ್ ಅರಸ್, ವನಜಾಕ್ಷಿ ಅವರು ವಿಪರೀತ ಜ್ವರದಿಂದ ಬಳಲುತ್ತಿದ್ದು, ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನವಿಗೆ ಸ್ಪಂದಿಸದ ಪಾಲಿಕೆ
ಶೌಚಾಲಯ ಸರಿಪಡಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಠಾಣೆಯಲ್ಲಿ ಪ್ರತ್ಯೇಕ ಮಹಿಳಾ ಶೌಚಾಲಯವಿಲ್ಲದ ಕಾರಣ ಇಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸರು ಪುರುಷ ಬಳಸುವ ಶೌಚಗೃಹವನ್ನೇ ಬಳಸಬೇಕಾಗಿದೆ. ಇದರಿಂದ ಮಹಿಳಾ ಸಿಬ್ಬಂದಿ ಸಾಕಷ್ಟು ಮುಜುಗರಪಟ್ಟು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಲಕ್ಷ್ಮೀಪುರಂ ಪೊಲೀಸರು.

ಲಕ್ಷ್ಮೀಪುರಂ ಠಾಣೆಯಲ್ಲಿರುವ ಶೌಚಾಲಯ ಹದಗೆಟ್ಟಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆದು ಶೌಚಾಲಯ ಸರಿಪಡಿಸುವ ಬಗ್ಗೆ ಸೂಚಿಸುತ್ತೇನೆ ಎನ್ನುತ್ತಾರೆ ನಗರ ಪೊಲೀಸ್ ಕಮಿಷನರ್ ಡಾ.ಎ. ಸುಬ್ರಹ್ಮಣೇಶ್ವರರಾವ್.