ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆ: ತೀವ್ರ ಕಟ್ಟೆಚ್ಚರ

ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆ: ತೀವ್ರ ಕಟ್ಟೆಚ್ಚರ

LK   ¦    Mar 22, 2020 02:45:23 PM (IST)
ಮೈಸೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಪತ್ತೆ: ತೀವ್ರ ಕಟ್ಟೆಚ್ಚರ

ಮೈಸೂರು: ಮೊದಲ ಬಾರಿಗೆ ಮೈಸೂರಿನಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ದುಬೈನಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಇರುವುದು ಧೃಡಪಟ್ಟಿರುವುದರಿಂದ ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ನಗರದ ವ್ಯಕ್ತಿಗೆ ಸೋಂಕು ಇರುವುದು ದೃಢವಾಗುತ್ತಿದ್ದಂತೆಯೇ ಜನ ಸ್ವಲ್ಪ ಮಟ್ಟಿಗೆ ಆತಂಕಗೊಂಡಿದ್ದು, ಇನ್ನಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಪ್ರಧಾನಿ ಕರೆ ನೀಡಿದ್ದ ಜನತಾ ಕಪ್ರ್ಯೂಗೆ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಕೊರೊನಾ ಸೋಂಕು ದೃಢವಾಗಿರುವ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ದುಬೈನಿಂದ ಶುಕ್ರವಾರ ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯ ಮೂಲಕ ಮೈಸೂರಿಗೆ ಬಂದಿದ್ದು, ಆತನಿಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯನ್ನು ಈಗಾಗಲೇ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕಿತ ವ್ಯಕ್ತಿ ಕೊರೊನಾ ವೈರಸ್ ಲಕ್ಷಣ ಕಂಡುಬಂದ ಕಾರಣ ಕೆ.ಆರ್.ಆಸ್ಪತ್ರೆಗೆ ಸ್ವತಃ ಬಂದು ತಪಾಸಣೆಗೊಳಪಟ್ಟಿದ್ದಾರೆ. ಅವರ ರಕ್ತದ ಮಾದರಿ ಪರೀಕ್ಷೆಗೆಂದು ಲ್ಯಾಬ್‍ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ವ್ಯಕ್ತಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿಯ ಪ್ರಯಾಣದ ಹಿನ್ನಲೆಯು ನಿಖರವಾಗಿ ದೊರಕಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಬರುವಾಗ ಮಂಡ್ಯದ ಸ್ಥಳವೊಂದರಲ್ಲಿ ಇಳಿದು ಟೀ ಕುಡಿದಿದ್ದಾರೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಮೈಸೂರು ಜಿಲ್ಲೆಯಲ್ಲಿ ಶನಿವಾರ ಸಂಜೆ 6 ಗಂಟೆವರೆಗೆ 240ಜನರ ಮೇಲೆ ನಿಗಾ ವಹಿಸಲಾಗಿದೆ. 170 ಮಂದಿ ಹೋಮ್ ಐಸೋಲೇಶನ್‍ನಲ್ಲಿದ್ದಾರೆ .69 ಮಂದಿ 14 ದಿನಗಳ ಹೋಮ್ ಐಸೋಲೇಶನ್ ಮುಗಿಸಿದ್ದಾರೆ. ಒಟ್ಟು 33 ಜನರನ್ನು ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 31 ವ್ಯಕ್ತಿಗೆ ನೆಗಿಟಿವ್ ಬಂದಿದೆ. ಒಬ್ಬರಿಗೆ ಸೋಂಕು ಇದೆ ಎಂದು ಧೃಡಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಯ ಪರೀಕ್ಷೆಯು ರಿಜೆಕ್ಟ್ ಆಗಿದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ 1077 ಹಾಗೂ ಆರೋಗ್ಯ ಸಹಾಯವಾಣಿ ಸಂಖ್ಯೆ 104ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಕೊರೊನಾ ಸೋಂಕು ಸಂಬಂಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೂ ಜನ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ. ಅದರ ಪರಿಣಾಮ ಇದೀಗ ಗೋಚರಿಸಿದೆ. ಭಾನುವಾರದ ಜನತಾ ಕಪ್ರ್ಯೂ ಇದೀಗ ಯಶಸ್ವಿಯಾಗಿದ್ದು, ಮೊದಲೇ ಎಲ್ಲರಿಗೂ ಈ ಬಗ್ಗೆ ಅರಿವು ಮೂಡಿಸಿರುವುದರಿಂದ ಮನೆಯಲ್ಲಿದ್ದುಕೊಂಡೇ ಕಾಲ ಕಳೆಯುತ್ತಿದ್ದಾರೆ.