ಶುಶ್ರೂಷಕರು ವೈದ್ಯಕೀಯ ಕ್ಷೇತ್ರದ ರಾಯಭಾರಿಗಳು

ಶುಶ್ರೂಷಕರು ವೈದ್ಯಕೀಯ ಕ್ಷೇತ್ರದ ರಾಯಭಾರಿಗಳು

LK   ¦    May 20, 2019 02:52:51 PM (IST)
ಶುಶ್ರೂಷಕರು ವೈದ್ಯಕೀಯ ಕ್ಷೇತ್ರದ ರಾಯಭಾರಿಗಳು

ಮೈಸೂರು: ಶುಶ್ರೂಷಕರು ವೈದ್ಯಕೀಯ ಕ್ಷೇತ್ರದ ರಾಯಭಾರಿಗಳಾಗಿದ್ದು, ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವಂತಾಗಬೇಕೆಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ಕಿವಿಮಾತು ಹೇಳಿದರು.

ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನಡೆದ ನರ್ಸಿಂಗ್ ಡೇ ಹಾಗೂ ನೂತನ ಸಭಾಂಗಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಜಯದೇವ ಆಸ್ಪತ್ರೆಗೆ ಅಂತಾರಾಷ್ಟ್ರೀಯ ಖ್ಯಾತಿ ಬರಬೇಕಾದರೆ ಶುಶ್ರೂಷಕರ ಪಾತ್ರ ಬಹಳ ಮುಖ್ಯವಾಗಿದ್ದು, ಅವರ ಸೇವಾ ಮನೋಭಾವನೆಗೆ ಧನ್ಯವಾದ ಸಲ್ಲಿಸಿದ ಅವರು, ಶುಶ್ರೂಷೆ ಎಂದರೆ ರೋಗಿಗಳಿಗೆ ಚಿಕಿತ್ಸೆ ಕೊಡುವುದಷ್ಟೆ ಅಲ್ಲ. ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಆತ್ಮವಿಶ್ವಾಸದಿಂದ ಅರ್ಧ ಕಾಯಿಲೆಗಳು ವಾಸಿಯಾಗುತ್ತವೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿಗೂ ತಾಯಿ ಹೃದಯ ಇರಬೇಕು. ಕೌಶಲ್ಯತೆ ಎಷ್ಟೇ ಇದ್ದರೂ ಸಾಲದು ಕರುಣೆ ಇರಬೇಕು. ನಮ್ಮ ನೋವು ನಮಗೆ ಅರ್ಥವಾದರೆ ನಾವು ಜೀವಂತವಾಗಿದ್ದೇವೆ ಎಂದರ್ಥ. ಬೇರೆಯವರ ನೋವು ನಮಗೆ ಅರ್ಥವಾದರೆ ಮಾನವೀಯರಾಗಿದ್ದೇವೆ ಎಂದರ್ಥ, ರೋಗಿಗಳನ್ನು ಗೌರವಿಸಬೇಕು. ನಮ್ಮ ಕೆಲಸವನ್ನು ಪ್ರೀತಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳು ಸಮಾಜವನ್ನು ಕೆಡಿಸುವ ಭಯೋತ್ಪಾದನಾ ಕೇಂದ್ರಗಳಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಮೊಬೈಲ್‍ನಲ್ಲಿ ಮಾತನಾಡಬೇಡಿ ಏಕೆಂದರೆ ನಿಮ್ಮ ಮೇಲೆ ರೋಗಿಗಳಿಗೆ ಅಪನಂಬಿಕೆ ಮೂಡುತ್ತದೆ. ನಗುನಗುತ ಕೆಲಸ ಮಾಡಿ ಎಂದ ಅವರು, ಫ್ಲಾರೆನ್ಸ್ ನೈಟಿಂಗೆಲ್‍ರವರ ಆದರ್ಶಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿರಿ, ಈ ಸಭಾಂಗಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ ಎಂದರು.

ಪ್ರಪಂಚದಲ್ಲಿಯೇ ಉತ್ತಮವಾದ ನರ್ಸಿಂಗ್ ಸೇವೆ ಜಯದೇವ ಆಸ್ಪತ್ರೆಯಲ್ಲಿದ್ದು ಎನ್‍ಎಬಿಹೆಚ್ ಪ್ರಾಧಿಕಾರದಿಂದ ಗುಣಮಟ್ಟದ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸರ್ಟಿಫಿಕೆಟ್ ನಮಗೆ ಸಿಕ್ಕಿದ್ದು, ರಾಜ್ಯಕ್ಕೆ ರಾಷ್ಟ್ರಕ್ಕೆ ಜಯದೇವ ಆಸ್ಪತ್ರೆ ಮಾದರಿ ಸಂಸ್ಥೆಯಾಗಿದೆ. ಮೈಸೂರು ಜಯದೇವ ಆಸ್ಪತ್ರೆ ಡಾ. ಸದಾನಂದ್ ನೇತೃತ್ವದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಗುಲ್ಬರ್ಗ ಜಯದೇವ ಆಸ್ಪತ್ರೆಗೆ 7 ಎಕರೆ ಭೂಮಿ ಮಂಜೂರಾಗಿದ್ದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ 3 ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ರವೀಂದ್ರನಾಥ್, ಹೈಕೋರ್ಟಿನ ಸೀನಿಯರ್ ಕೌನ್ಸಿಲರ್ ಜಗದೀಶ್, ಡಾ. ಶೇಖರ್, ಆಡಳಿತ ಮಂಡಳಿಯ ಸದಸ್ಯರಾದ ಕಾಳಪ್ಪ, ಡಾ. ಸದಾನಂದ್, ಡಾ. ಪಾಂಡುರಂಗ, ಡಾ. ಹರ್ಷಬಸಪ್ಪ, ಡಾ. ಸಂತೋಷ್, ಡಾ. ರಾಜೀತ್, ಡಾ. ಭಾರತಿ, ಡಾ. ವೀಣಾನಂಜಪ್ಪ, ಡಾ. ಮಂಜನಾಥ್, ಡಾ. ವಿಶ್ವನಾಥ್, ನರ್ಸಿಂಗ್ ಅಧೀಕ್ಷಕ ಹರೀಶ್‍ಕುಮಾರ್, ಪಿಆರ್‍ಓ ವಾಣಿಮೋಹನ್, ಗುರುರಾಜ್ ರೇಖಾ, ಕಾವೇರಿ ಹರೀಶ್ ಉಪಸ್ಥಿತರಿದ್ದರು.