ಕಾಸರಗೋಡು ಕನ್ನಡಿಗನಿಗೆ ರಾಜ್ಯದಲ್ಲಿ ಮೊದಲ ಸ್ಥಾನ

ಕಾಸರಗೋಡು ಕನ್ನಡಿಗನಿಗೆ ರಾಜ್ಯದಲ್ಲಿ ಮೊದಲ ಸ್ಥಾನ

MV   ¦    Apr 15, 2019 05:56:57 PM (IST)
ಕಾಸರಗೋಡು ಕನ್ನಡಿಗನಿಗೆ ರಾಜ್ಯದಲ್ಲಿ ಮೊದಲ ಸ್ಥಾನ

ಬಂಟ್ವಾಳ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅಳಿಕೆ ಶ್ರೀ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಅವರು ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು(ಶೇ. 99) ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಬದಿಯಡ್ಕದ ಪೆರ್ಡಾಲ ನಿವಾಸಿಯಾಗಿರುವ ಕೃಷಿಕ ಸುಬ್ರಹ್ಮಣ್ಯ ಭಟ್ ಹಾಗೂ ಶಾರದಾ ದಂಪತಿಯ ಪುತ್ರನಾಗಿರುವ ಶ್ರೀಕೃಷ್ಣ ಶರ್ಮ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಎಸ್ ಎಸ್ ಎಲ್ಸಿವರೆಗಿನ ವಿದ್ಯಾಭ್ಯಾಸ ಪಡೆದು ಪಿಯುಸಿ ಶಿಕ್ಷಣಕ್ಕೆ ಬಂಟ್ವಾಳ ತಾಲೂಕಿನ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವರು. ಇವರು ಇಂಗ್ಲಿಷ್ 96, ಸಂಸ್ಕೃತ 100, ಬಿಸ್ನೆಸ್ ಸ್ಟಡೀಸ್ 100, ಅಂಕಿಅಂಶ ಶಾಸ್ತ್ರ 100, ಲೆಕ್ಕಶಾಸ್ತ್ರ 100 ಮತ್ತು ಮೂಲ ಗಣಿತದ ಅಧ್ಯಯನದಲ್ಲಿ 100 ಅಂಕ ಸೇರಿ ಒಟ್ಟು 600 ಅಂಕಗಳಿಗೆ 596 (ಶೇ. 99) ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.

ನಿರೀಕ್ಷೆ ಹುಸಿಯಾಗಲಿಲ್ಲ..
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್ ನನ್ನ ನಿರೀಕ್ಷೆಯದಾಗಿತ್ತು, ನಿರೀಕ್ಷೆ ಹುಸಿಯಾಗಲಿಲ್ಲ ಎಂದು ವಾಣಿಜ್ಯ ವಿಭಾಗದ ರಾಜ್ಯದ ಪ್ರಥಮ ಸ್ಥಾನಿ, ಅಳಿಕೆ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಹೇಳಿದ್ದಾರೆ.

ತನ್ನ ಸಾಧನೆಗೆ ಹೆತ್ತವರ ಸ್ಪೂರ್ತಿಯೇ ಕಾರಣವಾಗಿದ್ದು, ಸಹಕಾರ ನೀಡಿದ ಉಪನ್ಯಾಸಕರಿಗೆ ಕೃತಜ್ಞತೆ ಸಲ್ಲಿಸಿದರು.ಕಷ್ಟಪಟ್ಟು ಓದಿದ್ದೇನೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಮುಂದೆ
ಬಿಕಾಂ ಪೂರೈಸಿ, ಭವಿಷ್ಯದಲ್ಲಿ ಸಿಎ ಆಗುವ ಕನಸು ನನ್ನದು ಎಂದಿರುವ ಶ್ರೀಕೃಷ್ಣ ಅವರ ಮಾತಿನಲ್ಲಿ ಸಂತಸ ತುಂಬಿತ್ತು. ಪಾಠಪ್ರವಚನ, ಪುನರಾವರ್ತನೆ ಎಲ್ಲವನ್ನೂ ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ನಡೆಸಿದ್ದಾರೆ, ಪರೀಕ್ಷಾ ಅವಧಿಯಲ್ಲಿ ಕಾಲೇಜಿನಲ್ಲಿ ಹಾಸ್ಟೆಲ್ ವ್ಯವಸ್ಥೆ ಒದಗಿಸಿದ್ದರು. ಹಾಗಾಗಿ ನನಗೆ ಎಕ್ಸಾಂ ಅವಧಿಯಲ್ಲಿ ಯಾವುದೇ ಒತ್ತಡ ಆಗಿಲ್ಲ. ಇಂಗ್ಲೀಷ್ ನಲ್ಲಿ ನಾಲ್ಕು ಅಂಕ ಕಡಿಮೆಯಾಗಿದೆ, ಇದನ್ನು ಮರುಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸುತ್ತೇನೆ ಎಂದರು.

ಕೃಷಿಕ ಕುಟುಂಬ
ಕೃಷಿಕ ಕುಟುಂಬದಲ್ಲಿ ಬೆಳೆದ ಶ್ರೀಕೃಷ್ಣ ಶರ್ಮ ಸುಬ್ರಹ್ಮಣ್ಯಭಟ್ ಮತ್ತು ಶಾರದಾ ದಂಪತಿಗಳ ಏಕೈಕ ಪುತ್ರರಾಗಿದ್ದು, ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪಡೆದಿದ್ದು ಪಿಯುಸಿ ವಿದ್ಯಾಭ್ಯಾಸಕ್ಕೆ ಅಳಿಕೆಸತ್ಯಸಾಯಿ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆಗೊಂಡಿದ್ದರು.

ಶ್ರಮಜೀವಿ: ಕಲಿಕೆಯ ದೃಷ್ಟಿಯಲ್ಲಿ ಶ್ರೀಕೃಷ್ಣ ಶರ್ಮ ಶ್ರಮಜೀವಿಯಾಗಿದ್ದು, ಶ್ರದ್ದೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿದಿನ ಬದಿಯಡ್ಕದಿಂದ ಅಳಿಕೆಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದ ಶ್ರೀಕೃಷ್ಣ ಶರ್ಮ ಮನೆಯಿಂದ 6.45ಕ್ಕೆ ಹೊರಟು, 8.15ಕ್ಕೆ ಕಾಲೇಜು ತಲುಪುತ್ತಿದ್ದರು.

ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಕಾಲೇಜಿಗೆ ಕೀರ್ತಿ ತಂದಿರುವ ಶ್ರೀಕೃಷ್ಣಶರ್ಮರ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ದೈವಜ್ಞ ಸಂತಸ ವ್ಯಕ್ತಪಡಿಸಿದ್ದಾರೆ.