ಕೊಡಗು ನೆರೆ ಸಂತ್ರಸ್ತರಿಗೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ 2 ಕೋಟಿ ದೇಣಿಗೆ

ಕೊಡಗು ನೆರೆ ಸಂತ್ರಸ್ತರಿಗೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ 2 ಕೋಟಿ ದೇಣಿಗೆ

DA   ¦    Sep 14, 2018 06:22:39 PM (IST)
ಕೊಡಗು ನೆರೆ ಸಂತ್ರಸ್ತರಿಗೆ ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ 2 ಕೋಟಿ ದೇಣಿಗೆ

ಬೆಳ್ತಂಗಡಿ: ಕೊಡಗಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ನೆರವಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ರೂ. 2 ಕೋಟಿಯ ಡಿ.ಡಿ.ಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಶುಕ್ರವಾರ ಹಸ್ತಾಂತರಿಸಲಾಯಿತು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರ ಕುಮಾರ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್ ಅವರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಧನಾದೇಶವನ್ನು ನೀಡಿದರು.

ಡಾ. ಹೆಗ್ಗಡೆಯವರು ಅತಿವೃಷ್ಟಿ ಪೀಡಿತ 1,175 ಕುಟುಂಬಗಳಿಗೆ ವಿವಿಧ ಉದ್ದೇಶಗಳಿಗೆ ತಲಾ ರೂ. 25,000/- ದಿಂದ ರೂ. 65,000/-ವರೆಗೆ ಮಂಜೂರು ಮಾಡಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

ಪರಿಹಾರ ನಿಧಿಗೆ ಮೊತ್ತವನ್ನು ಸ್ವೀಕರಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳು ಮಾದ್ಯಮವನ್ನುದ್ದೇಶಿಸಿ ಮಾತನಾಡುತ್ತಾ, ಧರ್ಮಸ್ಥಳದ ಧರ್ಮಾಧಿಕಾರಿಯವರು ರೂ. 8 ಕೋಟಿ ಮೊತ್ತದ ನೇರ ಪರಿಹಾರ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ. 2 ಕೋಟಿ ಮೊತ್ತವನ್ನು ನೀಡುತ್ತಿರುವ ಕುರಿತಂತೆ ಸರಕಾರದ ಪರವಾಗಿ ಅಭಿನಂದನೆ ವ್ಯಕ್ತಪಡಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆಯ ವತಿಯಿಂದ ಕೊಡಗಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತಂತೆ ಮತ್ತು ಅಗತ್ಯವಿರುವ ಪರಿಹಾರದ ಅವಶ್ಯಕತೆಯ ಕುರಿತಂತೆ ಸರ್ವೇಕ್ಷಣಾ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಕೊಡಗು ಪರಿಹಾರಕ್ಕೆ ಗರಿಷ್ಠ ನಿಧಿಯನ್ನು ನೀಡುವಂತೆ ಕೋರಲಾಯಿತು.

ನಿಯೋಗದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕರುಗಳಾದ ಮಹಾವೀರ ಅಜ್ರಿ, ಶಾಂತಾರಾಮ್ ಆರ್. ಪೈ, ಆನಂದ ಸುವರ್ಣ, ಕೊಡಗು ಜಿಲ್ಲಾ ನಿರ್ದೇಶಕರಾದ ಯೋಗೀಶ್, ಯೋಜನಾಧಿಕಾರಿ ಅಕ್ಷತಾ, ಮೇಲ್ವಿಚಾರಕಿ ಉಮಾ, ಗುಣಪಾಲ ಜೈನ್ ಮತ್ತು ಹೆಗ್ಗಡೆಯವರ ಆಪ್ತ ಸಹಾಯಕರಾದ ಕೃಷ್ಣ ಸಿಂಗ್‍ರವರು ಇದ್ದರು.