ಯುವಜನರ ರೋಲ್ ಮಾಡೆಲ್ ಹರೀಶ್ ಪೂಂಜರ ಬಗ್ಗೆ ಒಂದಿಷ್ಟು...

ಯುವಜನರ ರೋಲ್ ಮಾಡೆಲ್ ಹರೀಶ್ ಪೂಂಜರ ಬಗ್ಗೆ ಒಂದಿಷ್ಟು...

Suneetha RJ   ¦    May 15, 2018 04:03:52 PM (IST)
ಯುವಜನರ ರೋಲ್ ಮಾಡೆಲ್ ಹರೀಶ್ ಪೂಂಜರ ಬಗ್ಗೆ ಒಂದಿಷ್ಟು...

ಬೆಳ್ತಂಗಡಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಪೂಂಜ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ಹರೀಶ್ ಪೂಂಜ ಅವರು, ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ.ವಸಂತ ಬಂಗೇರ ಅವರ ವಿರುದ್ಧ ಬರೋಬ್ಬರಿ 22,974 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.

ಹರೀಶ್ ಪೂಂಜ ಅವರು 98417 ಮತ ಗಳಿಸಿದರೆ, ಶಾಸಕ ವಸಂತ ಬಂಗೇರ ಅವರು 75443 ಮತ ಗಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮಿಥಿಲ ಮನೆಯ ಮುತ್ತಣ್ಣ ಪೂಂಜ ಮತ್ತು ನಳಿನಿ ದಂಪತಿಗಳ ಮಗನಾಗಿರುವ ಹರೀಶ್ ಪೂಂಜ ಅವರು ಇದೀಗ ಬೆಳ್ತಂಗಡಿ ತಾಲೂಕಿನ ಜನತೆಯ ಮನ ಗೆದ್ದಿದ್ದಾರೆ ಅಂದ್ರೆ ತಪ್ಪಾಗಲ್ಲ.

ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿರುವ ಹರೀಶ್ ಪೂಂಜ ಅವರು ವೃತ್ತಿಯಲ್ಲಿ ವಕೀಲರು. ಬೆಂಗಳೂರಿನ ಹೈಕೋರ್ಟ್ ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಹರೀಶ್ ಅವರು ಭಾರತೀಯ ಜನತಾ ಪಾರ್ಟಿ ಹಾಗೂ ಹಿಂದೂ ಧರ್ಮ ಜಾಗರಣಾ ಸಂಘಟನೆಯ ಜವಾಬ್ದಾರಿಯನ್ನು ಕೂಡ ತಮ್ಮ ಹೆಗಲಿಗೇರಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದರು.

ಮಾತ್ರವಲ್ಲದೇ ಬಡವರ ಹಾಗೂ ಸಂತ್ರಸ್ಥರ ಪರವಾಗಿ ಸದಾ ಇವರ ಮನಸ್ಸು ತುಡಿಯುತ್ತಿದ್ದು, ಕೊಕ್ಕಡ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವ ಎಂಡೋ ಸಲ್ಫಾನ್ ಸಂತ್ರಸ್ಥರ ಪರವಾಗಿ ಹೋರಾಟ ಕೂಡ ನಡೆಸಿದ್ದಾರೆ.

ಆರ್.ಎಸ್.ಎಸ್ ಹಾಗೂ ವಿದ್ಯಾರ್ಥಿ ಪರಿಷತ್ ನಲ್ಲಿ ಹಲವಾರು ವರ್ಷಗಳ ಕಾಲ ದುಡಿದಿರುವ ಇವರು ಈ ಸಂಘಟನೆಯ ಮುಂದಾಳತ್ವ ವಹಿಸಿ ಹಲವು ಯುವಕರನ್ನು ಸಂಘಟಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಇವರು ಇಡೀ ಬೆಳ್ತಂಗಡಿ ತಾಲೂಕಿನಾದ್ಯಂತ ಹಲವಾರು ದೇವಸ್ಥಾನಗಳಿಗೆ ಬ್ರಹ್ಮಕಲಶ ನೆರವೇರಿಸಿ, ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಿದ್ದಲ್ಲದೇ, ಜನಸಾಮಾನ್ಯರ ಕಷ್ಟ ಕಾಲದಲ್ಲಿ ಸಹಾಯ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.

ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ದುಡಿಯುತ್ತಿದ್ದ ಹರೀಶ್ ಅವರ ಕಾರ್ಯಕ್ಷಮತೆಯನ್ನು ಕಂಡು ಬಿಜೆಪಿ ಪಕ್ಷ ಫುಲ್ ಖುಷಿಯಾಗಿತ್ತು. ಇದೀಗ ಬೆಳ್ತಂಗಡಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಪೂಂಜ ಅವರ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

More Images