‘ಹಸಿರು ಸಿರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ

‘ಹಸಿರು ಸಿರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ

Deepak Atavale   ¦    Apr 15, 2019 06:43:11 PM (IST)
‘ಹಸಿರು ಸಿರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ

ಬೆಳ್ತಂಗಡಿ: ನಳನಳಿಸುತ್ತಿರುವ 480 ಅಡಿಕೆ ಗಿಡ, ತೆಂಗು, ಬಾಳೆ, ಕಾಳುಮೆಣಸು, ಗೇರು ಬೀಜ, ಪಪ್ಪಾಯ, ಬೆಂಡೆಕಾಯಿ, ಬಸಳೆ, ನೆಲಬಸಳೆ, ನುಗ್ಗೆಕಾಯಿ, ತೊಂಡೆಕಾಯಿ ಮೊದಲಾದ ಹಣ್ಣು, ತರಕಾರಿ ಗಿಡಗಳು... ಇದು ಯಾವುದೋ ಖಾಸಗೀ ಎಸ್ಟೇಟ್‍ನ ಕಥೆಯಲ್ಲ... ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿರುವ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ಕೈ ತೋಟದಲ್ಲಿ ಕಂಡುಬರುವ ದೃಶ್ಯ.

ಓದು, ತರಗತಿ ಪಾಠದ ಬಳಿಕ ಇಲ್ಲಿನ ವಿದ್ಯಾರ್ಥಿಗಳು ಶಾಲೆಯ 1.54 ಎಕರೆ ಜಾಗದಲ್ಲಿರುವ ಅಕ್ಷರ ಕೈತೋಟದಲ್ಲಿ ಮಧ್ಯೆ ತರಕಾರಿ ಬೆಳೆಸುವುದು, ಗಿಡಗಳ ಪಾಲನೆ, ನೀರೆರೆಯುವುದು, ಗೊಬ್ಬರ ಹಾಕುವುದು, ನಿರ್ವಹಣೆ, ತರಕಾರಿ ಕಟಾವು ಮೊದಲಾದ ಕೃಷಿ ಕಾರ್ಯ ನಡೆಸುತ್ತಾರೆ. ಶಿಕ್ಷಕರು, ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳು ತೋಟದಲ್ಲಿ ಕೆಲಸ ಮಾಡುವ ಮೂಲಕ ಜೀವನ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಪರಿಸರದ ವೀಡಿಯೊ ಯೂಟ್ಯೂಬ್‍ನಲ್ಲಿದ್ದು ಜನಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳಿಂದ ಗಿಡನಾಟಿ
ವಿದ್ಯಾರ್ಥಿಗಳ ಹುಟ್ಟುಹಬ್ಬ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ವಿದಾಯ ಸಂದರ್ಭದಲ್ಲಿ ಫಲವಸ್ತುಗಳ ಗಿಡ ನಾಟಿ ಮಾಡುವ ಸಂಪ್ರದಾಯ ಪಾಲಿಸಲಾಗುತ್ತಿದೆ. ಈ ಮೂಲಕ ಮಕ್ಕಳು ಶಾಲಾ ವಾತಾವರಣ ಹಸಿರು ಮಾಡುವ ಕಾರ್ಯಕ್ಕೆ ಕೈ ಜೋಡಿಸುವ ಜೊತೆಗೆ ಪರಿಸರ ಪ್ರೇಮ ಪ್ರದರ್ಶಿಸುತ್ತಿದ್ದಾರೆ.

ಹೆಚ್ಚುತ್ತಿದೆ ಮಕ್ಕಳ ಸಂಖ್ಯೆ
ಮುಖ್ಯಶಿಕ್ಷಕಿ ಲೀಲಾವತಿ ಕೆ, ಸಹಶಿಕ್ಷಕಿಯರಾಗಿ ಚಂದ್ರಕ್ಕಿ ಹಾಗೂ ಅನಿತಾ ಜೊತೆಗೆ ಒಬ್ಬರು ಅತಿಥಿಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಲ್ಲಿ 26 ವಿದ್ಯಾರ್ಥಿಗಳಿದ್ದು ಮುಚ್ಚುವ ಭೀತಿ ಎದುರಿಸಿದ್ದರೂ ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಶಿಕ್ಷಕರು, ಪೋಷಕರು, ವಿದ್ಯಾಭಿಮಾನಿಗಳು, ಹಳೆವಿದ್ಯಾರ್ಥಿಗಳ ಪ್ರಯತ್ನದೊಂದಿಗೆ 2014ರ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 37ಕ್ಕೆ ಏರಿದೆ. 2015ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ್ದು, 2016ರಲ್ಲಿ 56 ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ನಡೆಸಿದ್ದಾರೆ. ಪ್ರಸಕ್ತ ವರ್ಷ 58 ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದು, 2019ರಲ್ಲಿ ಮಕ್ಕಳ ಸಂಖ್ಯೆ ಹೆಚ್ಚುವ ನಿರೀಕ್ಷೆ ಶಾಲಾಭಿವೃದ್ಧಿ ಸಮಿತಿಯದ್ದು. ಶಾಲೆಯ ಕೆಲ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಟ್ಟಡಗಳಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕಂಪ್ಯೂಟರ್ ಶಿಕ್ಷಣ
ದಾನಿಗಳು ನೀಡಿರುವ 2 ಕಂಪ್ಯೂಟರ್‍ ಗಳ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್ ಕಲಿಕೆಗೆ ಪ್ರತ್ಯೇಕ ಶಿಕ್ಷಕಿಯನ್ನೂ ನೇಮಿಸಲಾಗಿದ್ದು ದಿನಂಪ್ರತಿ ಪ್ರಾಯೋಗಿಕ ತರಗತಿಗಳು ನಡೆಯುತ್ತಿದೆ.

ಇಂಗ್ಲಿಷ್ ಶಿಕ್ಷಣಕ್ಕೆ ಆದ್ಯತೆ
ಒಂದನೇ ತರಗತಿ ವಿದ್ಯಾರ್ಥಿಗಳೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವಂತೆ ಮಾಡಲು ಪ್ರಯತ್ನ ನಡೆಯುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಕೆಲ ತರಗತಿ ನಡೆಸಲಾಗಿದೆ. ಇಂಗ್ಲಿಷ್ ಮಾಧ್ಯಮ ಆರಂಭಿಸುವ ಚಿಂತನೆಯೂ ನಡೆದಿದೆ. ವಾರಕ್ಕೆರಡು ದಿನ ಯೋಗ ತರಬೇತಿಯನ್ನೂ ನೀಡಲಾಗುತ್ತಿದೆ.

ಪ್ರತ್ಯೇಕ ಸಮವಸ್ತ್ರ
ಶಾಲಾ ಸಮವಸ್ತ್ರದ ಜತೆ ಇಲ್ಲಿನ ವಿದ್ಯಾರ್ಥಿಗಳು ವಾರಕ್ಕೊಂದು ದಿನ ಪ್ರತ್ಯೇಕ ಸಮವಸ್ತ್ರ ಧರಿಸುತ್ತಾರೆ. ಖಾಸಗೀ ಶಾಲೆಗಳ ವಿದ್ಯಾರ್ಥಿಗಳನ್ನೂ ಮೀರಿಸುವಂತೆ ಚಡ್ಡಿ, ಶರ್ಟ್, ಟೈ, ಐಡಿ ಕಾರ್ಡ್ ಧರಿಸಿ ತರಗತಿಗೆ ಹಾಜರಾಗುತ್ತಾರೆ. ಖಾಸಗೀ ಶಾಲೆಗಳಿಗೂ ಪೈಪೋಟಿ ನೀಡುವಂತೆ ಮಿಂಚುತ್ತಿದ್ದಾರೆ.

ಸಮಾಜಮುಖಿ ಕಾರ್ಯಕ್ರಮ
ವರ್ಷಂಪ್ರತಿ ಮಧುಸೂಧನ್ ಸ್ಮರಣಾರ್ಥ ರಕ್ತದಾನ ಶಿಬಿರ ನಡೆಸಲಾಗುತ್ತಿದೆ. ಸ್ವಾತಂತ್ಯ್ರ ದಿನಾಚರಣೆಯಂದು ಊರಿನ ಸೈನಿಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಈ ಸಂದರ್ಭ ಪೋಷಕರು ಹಾಗೂ ಊರಿನ ನಾಗರೀಕರಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದೆ. 2 ವರ್ಷಕ್ಕೊಮ್ಮೆ ಶಾಲೆಯಲ್ಲಿ ವಾರ್ಷಿಕೋತ್ಸವ ಹಮ್ಮಿಕೊಂಡು ಮೂಲಕ ಊರಿನ ಜನತೆ ಶಾಲೆಯ ಕುರಿತು ಕಾಳಜಿ ವಹಿಸುವಂತೆ ಮಾಡಲಾಗುತ್ತಿದೆ.

ಪ್ರಶಸ್ತಿಗಳ ಗರಿ
ಶಾಲೆಗೆ 2013ರಲ್ಲಿ ತಾಲೂಕು ಮಟ್ಟದ ‘ಉತ್ತಮ ಶಾಲಾ’ ಪ್ರಶಸ್ತಿ ಲಭಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.

18 ಲಕ್ಷಕ್ಕೂ ಹೆಚ್ಚು ಮೊತ್ತದ ಅಭಿವೃದ್ಧಿ
ರೋಟರಿ, ಲಯನ್ಸ್, ಜೆಸಿಐ, ಗ್ರಾಮಾಭಿವೃದ್ಧಿ ಯೋಜನೆ, ಸೇವಾಭಾರತಿ ಕನ್ಯಾಡಿ-2, ರೈತಬಂಧು ಆಹಾರೋದ್ಯಮ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಉದ್ಯಮಿಗಳು, ಊರ-ಪರವೂರ ವಿದ್ಯಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ. ಕಳೆದ 6 ವರ್ಷಗಳ ಅವಧಿಯಲ್ಲಿ ಸುಮಾರು 18 ಲಕ್ಷ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಕಂಪ್ಯೂಟರ್, ಫ್ಯಾನ್, ವಾಟರ್ ಫಿಲ್ಟರ್, ಧ್ವಜಸ್ಥಂಭ ಕಟ್ಟೆ, ಊಟದ ಕೊಠಡಿ, ಕೊಳವೆ ಬಾವಿಗೆ ಪಂಪ್ ಅಳವಡಿಕೆ, ಗೇಟ್ ನಿರ್ಮಾಣ, ಪೀಠೋಪಕರಣ, ಅಕ್ಷರ ಕೈತೋಟ ನಿರ್ಮಾಣ, ರಂಗಮಂದಿರ ನಿರ್ಮಾಣ ಮೊದಲಾದ ಕೊಡುಗೆ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿವೆ.

ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಶಾಲೆಯ ವಾತಾವರಣ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿರುವಂತೆ ರೂಪಿಸಲಾಗುತ್ತಿದೆ. ಈಗಾಗಲೇ ಹಲವು ಅಭಿವೃದ್ಧಿ ಕಾರ್ಯ ನಡೆಸಿದ್ದು, ಮುಂದೆ ಸುಸಜ್ಜಿತ ರಂಗ ಮಂದಿರ ನಿರ್ಮಾಣ, ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವಂತೆ ಮಾಡಲು ಯೋಜನೆ ನಡೆಯುತ್ತಿದೆ.
ಇಸ್ಮಾಯಿಲ್, ಅಧ್ಯಕ್ಷರು, ಶಾಲಾ ಮೇಲುಸ್ತುವಾರಿ ಸಮಿತಿ

ಶಿಕ್ಷಣ ಇಲಾಖೆ ಮಾರ್ಗದರ್ಶನದೊಂದಿಗೆ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಶಿಕ್ಷಣದಲ್ಲೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದು, ಅಕ್ಷರ ಕೈ ತೋಟದಲ್ಲಿಯೂ ಉತ್ಸಾಹದಿಂದ ಕೆಲಸ ಮಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆ ಪೋಷಕರ ಪ್ರೋತ್ಸಾಹವೂ ಉತ್ತಮವಾಗಿದೆ.
ಲೀಲಾವತಿ ಕೆ., ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ ಪಿಲಿಗೂಡು