ಕೊರೋನಾ ಭೀತಿ: ಮೂಡುಬಿದಿರೆ ತಾಲೂಕು ಸಂಪೂರ್ಣ ಲಾಕ್‍ಡೌನ್

ಕೊರೋನಾ ಭೀತಿ: ಮೂಡುಬಿದಿರೆ ತಾಲೂಕು ಸಂಪೂರ್ಣ ಲಾಕ್‍ಡೌನ್

DSK   ¦    Mar 25, 2020 10:01:29 AM (IST)
ಕೊರೋನಾ ಭೀತಿ: ಮೂಡುಬಿದಿರೆ ತಾಲೂಕು ಸಂಪೂರ್ಣ ಲಾಕ್‍ಡೌನ್

ಮೂಡುಬಿದಿರೆ: ಕೊರೋನಾ ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್‍ಗೆ ಒಳಗಾಗಿರುವ ಮೂಡುಬಿದಿರೆ ತಾಲೂಕು ಎರಡನೇ ದಿನವಾಗಿರುವ ಮಂಗಳವಾರದಂದು ಸಂಪೂರ್ಣ ಸ್ತಬ್ದವಾಗಿದೆ.

ಬೆಳಗ್ಗಿನ ಜಾವ ಪೇಟೆಯಲ್ಲಿ ಅಗತ್ಯ ಖರೀದಿ ಸೇರಿದಂತೆ ಒಂದಷ್ಟು ಜನರು ವಾಹನಗಳ ಜತೆ ಪೇಟೆಯಲ್ಲಿ ಕಂಡು ಬಂದರು. ಆದರೆ ಪೋಲೀಸರ ಸಕಾಲಿಕ ಎಚ್ಚರಿಕೆ, ಧ್ವನಿವರ್ಧಕಗಳ ಮೂಲಕ ಪ್ರಚಾರದ ಫಲವಾಗಿ ದಿನಸಿ, ಹಣ್ಣು ಹಂಪಲು ಜತೆಗೆ ಅಗತ್ಯ ಸೇವೆಗಳ ಇತರೆ ವರ್ತಕರೂ ಅಪರಾಹ್ನದ ವೇಳೆಗೆ  ವ್ಯವಹಾರ ಸ್ಥಗಿತಗೊಳಿಸಿದರು.

ಬ್ಯಾಂಕು ಸಹಿತ ಸರಕಾರಿ ಕಚೇರಿಗಳಲ್ಲಿ ಕೆಲವು ತೆರೆದುಕೊಂಡರೂ ಸಾರ್ವಜನಿಕರ ಒತ್ತಡವೇ ಇರಲಿಲ್ಲ. ಖಾಸಗಿ, ಸರಕಾರಿ ಬಸ್ಸುಗಳೂ ಓಡಾಡಲಿಲ್ಲ. ಬಾಡಿಗೆ ರಿಕ್ಷಾಗಳೂ ಕಾಣಲಿಲ್ಲ.

ಖಾಸಗಿ ವಾಹನಗಳಲ್ಲಿ ಕೆಲವರು ಪೇಟೆಗೊಂದು ರೌಂಡ್ ಹೊಡೆದಂತೆ ಕಂಡರೂ  ಹೊತ್ತು ಏರಿದಂತೆ ಮನೆಗಳಿಗೆ ಸೀಮಿತಗೊಂಡರು. ಜನವಾಹನ ಸಂಚಾರವಿಲ್ಲದೇ ಪೇಟೆ ಬಿಕೋ ಎನ್ನುತ್ತಿತ್ತು.

ಕಾಂತಾವರ ಕ್ರಾಸ್ ಉಡುಪಿ ಜಿಲ್ಲೆಯ ಗಡಿ ಭಾಗವಾದ್ದರಿಂದ ಒಳಗೆ ಬರುವವರನ್ನು ಪೊಲೀಸರು ಮತ್ತು ವೈದ್ಯರು ತಪಾಸಣೆಗೊಳಪಡಿಸುತ್ತಿದ್ದಾರೆ. ಉಳಿದೆಡೆ ಅನ್ಯ ಜಿಲ್ಲೆಯ ಗಡಿ ಭಾಗಗಳಲ್ಲಿಯೂ ಎಚ್ಚರಿಕೆ ವಹಿಸಲಾಗಿದೆ.

ಮೂಡುಬಿದಿರೆ ಪರಿಸರದ ಮಸೀದಿಗಳಲ್ಲಿ ಮಂಗಳವಾರದಿಂದ ಸಾಮೂಹಿಕ ಪ್ರಾರ್ಥನೆ ಬದಲು ಮನೆಯಲ್ಲೇ ಪ್ರಾರ್ಥಿಸಿ ಎಂಬ ಆಜಾನ್(ಬಾಂಕ್) ಮೊಳಗಿದೆ.

ಪಾರ್ಸೆಲ್‍ಗಳಿಗಷ್ಟೇ ಸೀಮಿತವಾಗಬೇಕಿದ್ದ ಹೊಟೆಲ್‍ಗಳವರೂ ಗಿರಾಕಿಗಳಿಲ್ಲದೇ ಕೆಲವೆಡೆ ಬಾಗಿಲೆಳೆದುಕೊಂಡಿದ್ದಾರೆ.

ವಾಟ್ಸಾಪ್ ಗ್ರೂಫ್‍ಗಳಲ್ಲಿಯೂ ಕೊರೋನಾ ಸದ್ದು ಮಾಡಿದೆ. 'ರೆಸ್ಟ್ ಎಟ್ ಹೋಮ್ ಆರ್ ರೆಸ್ಟ್ ಇನ್ ಪೀಸ್ ' ಎಂಬಿತ್ಯಾದಿ ಮೇಸೇಜುಗಳು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿವೆ. ಅಕ್ಷರಸ್ಥರ ಅಜ್ಞಾನದ ವರ್ತನೆ ಟೀಕೆಗೆ ಗುರಿಯಾಗಿದೆ. ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಬಹುತೇಕ ಮಂದಿ ಬೀದಿಗಿಳಿದರೂ ಮುಖಗವಸು ಕಟ್ಟಿಕೊಂಡಿದ್ದರು.

ಮನೆಯಲ್ಲೇ ಉಳಿದು ಸಹಕರಿಸಿ ಎಂಬ ವ್ಯಾಪಕ ಮನವಿಗೆ ಮೂಡುಬಿದಿರೆ ತಾಲೂಕಿನ ಜನತೆ ಮಂಗಳವಾರ ಬಹುಪಾಲು ಸಹಕಾರ ನೀಡಿದೆ.