ಸುಳ್ಯದಲ್ಲಿ ಎರಡು ಸರ್ಕಾರಿ ಶಾಲೆಗಳಿಗೆ ಬೀಗ

ಸುಳ್ಯದಲ್ಲಿ ಎರಡು ಸರ್ಕಾರಿ ಶಾಲೆಗಳಿಗೆ ಬೀಗ

GK   ¦    Jul 10, 2018 04:17:34 PM (IST)
ಸುಳ್ಯದಲ್ಲಿ ಎರಡು ಸರ್ಕಾರಿ ಶಾಲೆಗಳಿಗೆ ಬೀಗ

ಸುಳ್ಯ: ಮಕ್ಕಳಿಲ್ಲದೆ ಈ ವರ್ಷ ಸುಳ್ಯ ತಾಲೂಕಿನಲ್ಲಿ ಎರಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬೀಗ ಬಿದ್ದಿದೆ. ಗಡಿಗ್ರಾಮಗಳ ಎರಡು ಸರ್ಕಾರಿ ಶಾಲೆಗಳು ಮುಚ್ಚಿದೆ. ಕೇರಳ ಮತ್ತು ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ರಂಗತ್ತಮಲೆ ಕಿರಿಯ ಪ್ರಾಥಮಿಕ ಶಾಲೆ ಮತ್ತು ಮಂಡೆಕೋಲು ಗ್ರಾಮದ ಕುಕ್ಕೆಟ್ಟಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಲ್ಲದೆ ಸೊರಗಿ ಶಾಲೆಯನ್ನು ಬಂದ್ ಮಾಡಲಾಗಿದೆ. ಈ ಎರಡು ಶಾಲೆಗಳಿಗೆ ಕಳೆದ ವರ್ಷ ಮತ್ತು ಈ ವರ್ಷ ಹೊಸ ದಾಖಲಾತಿ ಆಗಿಲ್ಲ.

ಆಲೆಟ್ಟಿ ಗ್ರಾಮದ ತುದಿಯಲ್ಲಿ ಕೇರಳ ರಾಜ್ಯದ ಗಡಿಯಲ್ಲಿ ಪ್ರಕೃತಿ ರಮಣೀಯತೆಯ ಮಡಿಲಲ್ಲಿ ಬೆಟ್ಟದ ತುದಿಯಲ್ಲಿದ್ದ ರಂಗತ್ತಮಲೆ ಶಾಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಮಕ್ಕಳ ದಾಖಲಾತಿ ಕಡಿಮೆಯಾಗಿ ಸೊರಗಿತ್ತು. ಒಂದರಿಂದ ಐದನೇ ತರಗತಿಯವರೆಗಿರುವ ಶಾಲೆಯಲ್ಲಿ ಕಳೆದ ವರ್ಷ ಒಟ್ಟು ಏಳು ಮಕ್ಕಳಿದ್ದರು. ಎರಡು ಮತ್ತು ಮೂರನೇ ತರಗತಿಯಲ್ಲಿ ಒಬ್ಬೊಬ್ಬರು ಮತ್ತು ಐದನೇ ತರಗತಿಯಲ್ಲಿ ಐದು ಮಕ್ಕಳಿದ್ದರು. ಐದನೇ ತರಗತಿಯ ಮಕ್ಕಳು ಉತ್ತೀರ್ಣರಾಗಿ ಹೋದರೆ ಉಳಿದ ಇಬ್ಬರು ಮಕ್ಕಳು ಟಿಸಿ ಪಡೆದು ಬೇರೆ ಶಾಲೆಗೆ ಸೇರ್ಪಡೆಯಾದಾಗ ಶಾಲೆಯಲ್ಲಿ ಶಿಕ್ಷಕ ಮಾತ್ರ ಉಳಿದರು. ಕುಕ್ಕೆಟ್ಟಿ ಶಾಲೆಯ ಪರಿಸ್ಥಿತಿಯೂ ಭಿನ್ನವಲ್ಲ. ಕಳೆದ ಬಾರಿ ಎಂಟು ಮಕ್ಕಳಿದ್ದರು. ಎರಡನೇ ತರಗತಿಯಲ್ಲಿ ಮೂರು ಮಕ್ಕಳು, ಮೂರನೇ ತರಗತಿಯಲ್ಲಿ ಒಂದು, ಐದರಲ್ಲಿ ನಾಲ್ಕು ಮಕ್ಕಳಿದ್ದರು. ಐದನೇ ತರಗತಿಯಲ್ಲಿದ್ದ ನಾಲ್ಕು ಮಕ್ಕಳು ಉತ್ತೀರ್ಣರಾಗಿ ಮತ್ತು ಇತರ ತರಗತಿಯಲ್ಲಿ ಉಳಿದ ಮಕ್ಕಳು ಟಿಸಿ ಪಡೆದು ಬೇರೆ ಶಾಲೆಗಳಿಗೆ ಹೋದಾಗ ಶಾಲೆಗೆ ಬೀಗ ಬೀಳುವುದು ಅನಿವಾರ್ಯವಾಯಿತು.

ಮುಂದುವರಿದ ಮುಚ್ಚುವ ಸರಣಿ:
ಸುಳ್ಯ ತಾಲೂಕಿನಲ್ಲಿ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳು ಮುಚ್ಚುವ ಸರಣಿ ಮುಂದುವರಿದಿದೆ. ಎರಡು ವರ್ಷಗಳ ಹಿಂದೆ ಅರ್ಧ ಶತಮಾನ ಪೂರೈಸಿದ್ದ ಆಲೆಟ್ಟಿ ಗ್ರಾಮದ ಭೂತಕಲ್ಲು ಸರ್ಕಾರಿ ಶಾಲೆ ಮುಚ್ಚಿತ್ತು. ಜಾಲ್ಸೂರು ಗ್ರಾಮದ ಕೆಮನಬಳ್ಳಿ ಶಾಲೆ ಮಕ್ಕಳಿಲ್ಲದೆ ಒಮ್ಮೆ ಮುಚ್ಚಿ ಮತ್ತೆ ತೆರೆದುಕೊಂಡು ಕೆಲವು ವರ್ಷಗಳ ಬಳಿಕ ಮತ್ತೆ ಮುಚ್ಚಿದೆ.

ಪಂಜ ಸಮೀಪದ ಬಾಬ್ಲುಬೆಟ್ಟು ಶಾಲೆ ಕೆಲವು ವರ್ಷಗಳ ಹಿಂದೆ ಮುಚ್ಚಿ ಮತ್ತೆ ಕದ ತೆರೆದಿಲ್ಲ. ಮುಚ್ಚುವ ಸರಣಿಗೆ ಈ ವರ್ಷ ಎರಡು ವಿದ್ಯಾದೇಗುಲಗಳು ಸೇರ್ಪಡೆಗೊಂಡಿದೆ. ಕೊಲ್ಲಮೊಗ್ರ ಗ್ರಾಮದ ಬೆಂಡೋಡಿ ಶಾಲೆ ಮಕ್ಕಳಿಲ್ಲದೆ ಒಮ್ಮೆ ಮುಚಿದ್ದರೂ ಮತ್ತೆ ತೆರದು ಕಾರ್ಯಾರಂಭ ಮಾಡಿದೆ. ತಾಲೂಕಿನ ಹಲವು ಸರ್ಕಾರಿ ಶಾಲೆಗಳಲ್ಲಿ ಈಗ ಮಕ್ಕಳ ಸಂಖ್ಯೆ ಕುಸಿದಿದೆ. ಕೆಲವು ದಶಕಗಳ ಹಿಂದೆ ಪ್ರತಿ ತರಗತಿಯಲ್ಲಿಯೂ 50-60 ಮಕ್ಕಳಿಂದ ತುಂಬಿ ತುಳುಕುತ್ತಿದ್ದ ತರಗತಿಯಲ್ಲಿ ಈಗ ಬೆರಳೆಣಿಕೆಯ ಮಕ್ಕಳು ಮಾತ್ರ ಇದ್ದಾರೆ.