ಬಿಜೆಪಿಯ ಜನಪ್ರತಿನಿಧಿಗಳಿಗೆ ನಿದ್ದೆಯಲ್ಲಿದ್ದಾರೆ: ರಮಾನಾಥ ರೈ

ಬಿಜೆಪಿಯ ಜನಪ್ರತಿನಿಧಿಗಳಿಗೆ ನಿದ್ದೆಯಲ್ಲಿದ್ದಾರೆ: ರಮಾನಾಥ ರೈ

MK   ¦    Sep 11, 2019 05:20:34 PM (IST)
ಬಿಜೆಪಿಯ ಜನಪ್ರತಿನಿಧಿಗಳಿಗೆ ನಿದ್ದೆಯಲ್ಲಿದ್ದಾರೆ: ರಮಾನಾಥ ರೈ

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್‍ನಿಂದ ಮಾಣಿ ಜಂಕ್ಷನ್ ತನಕ ರಸ್ತೆಯು ಸಂಪೂರ್ಣ ಹದೆಗೆಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಪ್ರತಿಭಟನಾ ಪಾದಯಾತ್ರೆ ಬುಧವಾರ ಮೆಲ್ಕಾರ್‍ನಿಂದ ಬಿ.ಸಿ.ರೋಡ್‍ವರೆಗೆ ನಡೆಯಿತು. ಮೆಲ್ಕಾರ್ ಜಂಕ್ಷನ್‍ನಲ್ಲಿ 5 ನಿಮಿಷಗಳ ಕಾಲ ಹೆದ್ದಾರಿ ತಡೆ ಮಾಡಲಾಯಿತು.

ಮೆಲ್ಕಾರ್ ಜಂಕ್ಷನ್‍ನಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಾಹನ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಕೇಂದ್ರ, ರಾಜ್ಯ ಸರಕಾರವಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ರೀತಿಯ ಗಮನಹರಿಸದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ನಿವೃತ್ತಿ: ಬಿಜೆಪಿ ಸಂಸದರು ಕೇವಲ ಓಟಿಗಾಗಿ ನಾಟಕ ಮಾಡುತ್ತಿದ್ದಾರೆ. ಇದರಿಂದಲೇ ಹೆದ್ದಾರಿ ಹದಗೆಟ್ಟು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೆದ್ದಾರಿ ಚತುಷ್ಪಥದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬಿಜೆಪಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆ ಕಂಪೆನಿಗಳ ನಡುವಿನ ಶೀತಲ ಸಮರವೇ ಇದಕ್ಕೆ ಕಾರಣ. ಆದರೆ, ಭೂಸ್ವಾಧೀನ ಪ್ರಕ್ರಿಯೆಯ ವಿಳಂಬ ಎಂಬ ಕಾರಣವನ್ನು ನೀಡಲಾಗುತ್ತಿದೆ. ಚತುಷ್ಪಥ ಕಾಮಗಾರಿ ಅರ್ಧಕ್ಕೆ ನಿಂತಿರುವುದಕ್ಕೆ ಇದುವೇ ನೈಜ ಕಾರಣವಾಗಿದ್ದರೆ, ತಾನು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಅವರು ಘೋಷಿಸಿದರು.

ಬಿಜೆಪಿಯ ಜನಪ್ರತಿನಿಧಿಗಳಿಗೆ ನಿದ್ದೆ: ತಾನು ಅಧಿಕಾರದಲ್ಲಿದ್ದಾಗ ಕ್ಷೇತ್ರದ ಎಲ್ಲ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವಂತಾ ಕೆಲಸ ಆಗಿತ್ತು. ಮೆಲ್ಕಾರ್‍ನ ರಸ್ತೆಯ ಅಗಲೀಕರಣದಿಂದ ತೊಡಗಿ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಆದರೆ, ಇದೀಗ ಹೆದ್ದಾರಿಯೇ ಹದಗೆಟ್ಟಿದ್ದರೂ ಬಿಜೆಪಿಯ ಜನಪ್ರತಿನಿಧಿಗಳು ನಿದ್ದೆಯಲ್ಲಿದ್ದಾರೆ ಎಂದರು.

ಪ್ರಧಾನಿಗೆ ಪತ್ರ ಬರೆಯಿರಿ: ಭಾವನಾತ್ಮಕವಾಗಿ ಜನರನ್ನು ಮರುಳು ಮಾಡಿ, ಓಟುಗಿಟ್ಟಿಸುವುದೇ ಬಿಜೆಪಿಯ ಹವ್ಯಾಸ ಎಂದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಆದ ಕಾಮಗಾರಿಯನ್ನು ಬಿಜೆಪಿ ಪ್ರಧಾನಿಗೆ ಪತ್ರ ಬರೆದು ಪ್ರಚಾರ ಗಿಟ್ಟಿಸಿತ್ತು. ಇದೀಗ ಹೆದ್ದಾರಿ ಹದಗೆಟ್ಟಿದ್ದರೂ, ಯಾರೂ ಯಾಕೆ ಪತ್ರ ಬರೆಯುತ್ತಿಲ್ಲ. ಅವರ ಪೆನ್ನಿನಲ್ಲಿ ಶಾಯಿ ಮುಗಿದಿದೆಯೇ ಎಂದು ವ್ಯಂಗ್ಯವಾಡಿದ ರೈ, ಈ ಕೂಡಲೇ ಪ್ರತಿಯೊಬ್ಬರೂ, ಮೋದಿಗೆ ಪತ್ರ ಬರೆಯಬೇಕು. ಇಲ್ಲಿನ ಸಂಸದ ನಳಿನ್ ಕುಮಾರ್ ಕಟೀಲು ಅವರಿಂದ ಹೆದ್ದಾರಿ ಮುತುವರ್ಜಿ ಸಾಧ್ಯವಿಲ್ಲ. ಹಾಗಾಗಿ ಬೇಗ ಹೆದ್ದಾರಿ ದುರಸ್ಥಿ ಮಾಡಿ ಎಂದು ಪ್ರಧಾನಿಗೆ ಪತ್ರ ಬರೆಯುವಂತೆ ಅವರು ಕರೆ ನೀಡಿದರು.

ಶೀಘ್ರ ಸಂಪೂರ್ಣ ದುರಸ್ತಿ ಮಾಡಲಿ: ಪ್ರಧಾನಿ ಮಂತ್ರಿಯನ್ನು ಟೀಕಿಸಿದವರ ಮೇಲೆ ದೇಶದ್ರೋಹದ ಆರೋಪ ಹೊರಿಸುವವರು, ಮಹಾತ್ಮಾ ಗಾಂಧಿ, ಇಂದಿರಾಗಾಂಧಿ, ನೆಹರೂ ರವರನ್ನು ಟೀಕಿಸುವವರನ್ನು ಏನನ್ನಬೇಕು? ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನತೆಯ ಪ್ರಾಣದ ಜೊತೆ ಚೆಲ್ಲಾಟ ವಾಡದೆ ನೈಜ ಕಾಳಜಿಯಿಂದ ಕೆಲಸ ಮಾಡಬೇಕು. ಎಲ್ಲ ರಸ್ತೆಗಳ ತೇಪೆ ಮಾತ್ರವಲ್ಲ, ಸಂಪೂರ್ಣ ದುರಸ್ತಿ ಮಾಡಬೇಕು ಎಂದು ರೈ ಆಗ್ರಹಿಸಿದರು.

ಕೇಂದ್ರ, ರಾಜ್ಯ ಸರಕಾರಕ್ಕೆ ಕಿವಿ ಕೇಳುದಿಲ್ಲ, ಬಾಯಿ ಬರುದಿಲ್ಲ, ಕಣ್ಣು ಕಾಣುದಿಲ್ಲ ಎಂದ ಅವರು, ಸರಕಾರ ಬೇಗ ಕಣ್ಣು ತೆರೆಯುವಂತಾಗಬೇಕು ಎಂದು ಆಗ್ರಹಿಸಿದರು.

ಬಳಿಕ ಪಾದಯಾತ್ರೆಯ ಮೂಲಕ ಬಿ.ಸಿ.ರೋಡ್ ಮಿನಿವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಮಂಜುಳಾ ಮಾದವ ಮಾವೆ, ಸುದರ್ಶನ ಜೈನ್, ಚಂದ್ರಹಾಸ ಕರ್ಕೇರ, ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಪದ್ಮನಾಭ ರೈ, ಸುದರ್ಶನ್ ರೈ, ಧನಲಕ್ಮೀ ಸಿ.ಬಂಗೇರ, ಸದಾಶಿವ ಬಂಗೇರ, ಸಿದ್ದೀಕ್ ಗುಡ್ಡೆಯಂಗಡಿ, ಚಿತ್ತರಂಜನ್ ಶೆಟ್ಟಿ, ಲುಕ್ಮಾನ್ ಕೈಕಂಬ, ಪ್ರಶಾಂತ್, ಮುಹಮ್ಮದ್ ನಂದರಬೆಟ್ಟು, ಮಹೇಶ್, ಪರಮೇಶ್ವರ ಮೂಲ್ಯ, ಕಾಂಚಲಾಕ್ಷೀ, ವೆಂಕಪ್ಪ ಪೂಜಾರಿ, ವಾಸು ಪೂಜಾರಿ, ಶರೀಫ್ ಶಾಂತಿಯಂಗಡಿ, ಜೆಡಿಎಸ್ ಮುಖಂಡರಾದ ಮುಹಮ್ಮದ್ ಶಫಿ, ಪಿ.ಎ.ರಹೀಂ, ಹಾರೂನ್ ರಶೀದ್ ಹಾಜರಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಸ್ವಾಗತಿಸಿ, ಸುದೀಪ್ ಕುಮಾರ್ ಮಾಣಿ ಕಾರ್ಯಕ್ರಮ ನಿರೂಪಿಸಿದರು.