ಬೆಳ್ತಂಗಡಿ: ಜಲಸ್ಫೋಟಕ್ಕೆ ಕೊಚ್ಚಿಹೋದ ಸೇತುವೆಗೆ ಸ್ಟೀಲ್ ಬ್ರಿಡ್ಜ್

ಬೆಳ್ತಂಗಡಿ: ಜಲಸ್ಫೋಟಕ್ಕೆ ಕೊಚ್ಚಿಹೋದ ಸೇತುವೆಗೆ ಸ್ಟೀಲ್ ಬ್ರಿಡ್ಜ್

DA   ¦    Sep 11, 2019 05:25:16 PM (IST)
ಬೆಳ್ತಂಗಡಿ: ಜಲಸ್ಫೋಟಕ್ಕೆ ಕೊಚ್ಚಿಹೋದ ಸೇತುವೆಗೆ ಸ್ಟೀಲ್ ಬ್ರಿಡ್ಜ್

ಬೆಳ್ತಂಗಡಿ : ಕಳೆದ ಆ. 9 ರಂದು ಸುರಿದ ಮಹಾಮಳೆಗೆ ಹಾಗೂ ಪಶ್ಚಿಮಘಟ್ಟದಲ್ಲಿ ಆದ ಜಲಸ್ಪೋಟಕ್ಕೆ ಕೊಚ್ಚಿಹೋದ ಅನಾರು ಸೇತುವೆಗೆ ಸುಮಾರು 15ಲಕ್ಷ ರೂ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ಅಳವಡಿಸಲು ಇಲಾಖೆ ಮುಂದಾಗಿದೆ.

ಇದರಿಂದ ಕತ್ತರಿಗುಡ್ಡೆ, ಅನಾರು, ನಳ್ಳಿಲಿ, ಸಾತಿಲು ನಿವಾಸಿಗಳಿಗೆ ಸುತ್ತುಬಳಸಿ ಸುಮಾರು 25 ಕಿ.ಮೀ. ಪ್ರಯಾಣಿಸುವುದು ತಪ್ಪಲಿದೆ.

ಶಾಸಕ ಹರೀಶ್ ಪೂಂಜಾರವರ ಸೂಚನೆಯಂತೆ ಇಲಾಖೆ ಸ್ಟೀಲ್ ಬ್ರಿಡ್ಜ್ ಅಳವಡಿಸಲು ಈಗಾಗಲೇ ಪೂರ್ವ ತಯಾರಿ ನಡೆಸಿದೆ. ಸೇತುವೆ ಹಾನಿಯಿಂದ ಈ ಭಾಗದ ಹಲವಾರು ಕುಟುಂಬಗಳಿಗೆ ತೊಂದರೆಯಾಗಿದ್ದು ಮಕ್ಕಳು ಸೇರಿದಂತೆ ಸುಮಾರು 75ಕುಟುಂಬಗಳು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿದ ರಸ್ತೆಯು ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದ್ದು ದ್ವಿಚಕ್ರ ವಾಹನ ಕೂಡ ಹೋಗದ ಸ್ಥಿತಿಯಲ್ಲಿದೆ. ಮಕ್ಕಳು ಶಾಲೆಗೆ ಹೋಗಲು ತೊಂದರೆಯನ್ನು ಗಮನಿಸಿ ಶಾಸಕ ಹರೀಶ್ ಪೂಂಜಾರವರು ಬೆಳಿಗ್ಗೆ ಮತ್ತು ಸಂಜೆ ಹೊತ್ತು ಬಾಡಿಗೆ ನೆಲೆಯಲ್ಲಿ ಜೀಪನ್ನು ವ್ಯವಸ್ಥೆಗೊಳಿಸಿದ್ದು ಇದರಿಂದ ಮಕ್ಕಳು ಶಾಲೆಗೆ ಹೋಗುವಂತಾಗಿದೆ.ಜೀಪು ಬಿಟ್ಟರೆ ಇನ್ಯಾವುದೇ ವಾಹನಗಳು ಈ ರಸ್ತೆಯಲ್ಲಿ ಹೋಗುವಂತಿಲ್ಲ.

ಇದೀಗ ಅನಾರು ಸ್ಟೀಲ್ ಬ್ರಿಡ್ಜ್ ಅಳವಡಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಸುಮಾರು 50ಮೀಟರ್ ಉದ್ದ ಹಾಗೂ ನಾಲ್ಕು ಅಡಿ ಅಗಲದ ಬ್ರಿಡ್ಜ್ ನಿರ್ಮಾಣವಾಗಲಿದ್ದು ಇದರಲ್ಲಿ ಪಾದಾಚಾರಿಗಳಿಗೆ ಹಾಗೂ ದ್ವಿಚಕ್ರಿಗಳಿಗೆ ಹೋಗಲು ಅನುಕೂಲವಾಗಲಿದೆ. ಈಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರಿನ ಅಂತರ ಹೆಚ್ಚಾಗಿದ್ದು ಇದರಿಂದ ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ. ನೀರು ಇಳಿಕೆಯಾದ ತಕ್ಷಣ ಸ್ಟೀಲ್ ಬ್ರಿಡ್ಜ್ ಅಳವಡಿಕೆ ಕಾಮಗಾರಿ ನಡೆಯಲಿದೆ.

ಇದೇ ರೀತಿ ಬಾಂಜಾರುಮಲೆ ಸೇತುವೆ ಹಾನಿಗೊಳಗಾದಾಗ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ಕೆಲವೇ ದಿನಗಳಲ್ಲಿ ತಾತ್ಕಾಲಿಕ ಸ್ಟೀಲ್ ಬ್ರಿಡ್ಜ್ ಅಳವಡಿಸುವ ಮೂಲಕ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ನೀಡಿದ್ದು ಎಲ್ಲರಿಂದಲೂ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

ಅನಾರು ಸೇತುವೆ ಹಾನಿಗೊಳಗಾದ ಸ್ಥಳದಲ್ಲಿ ಸುಮಾರು 15ಲಕ್ಷ ರೂ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ಸೇತುವೆ ನಿರ್ಮಾಣವಾಗಲಿದ್ದು ನದಿಯಲ್ಲಿ ನೀರಿನ ಅಂತರ ಹೆಚ್ಚಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ. ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಲಿದ್ದು ಶೀಘ್ರವೇ ಈ ಭಾಗದ ಜನರ ಸಮಸ್ಯೆ ಪರಿಹಾರವಾಗಲಿದೆ.
ಶಿಪ್ರಸಾದ್ ಅಜಿಲ

ಅನಾರು ಸೇತುವೆ ಸಂಪರ್ಕ ಕಡಿದುದರಿಂದ ನಾವು ಕಕ್ಕಿಂಜೆ,ಬೆಳ್ತಂಗಡಿ, ಉಜಿರೆ ಮುಂತಾದ ಪ್ರದೇಶಕ್ಕೆ ಹೋಗಬೇಕಾದರೆ ಸುಮಾರು 25ಕಿ.ಮೀ ನಡೆದುಕೊಂಡೇ ಹೋಗಬೇಕಾಗುತ್ತದೆ. ದ್ವಿಚಕ್ರ ವಾಹನ ಕೂಡ ಈ ರಸ್ತೆಯಲ್ಲಿ ಹೋಗುವಂತಿಲ್ಲ. ಮಕ್ಕಳ ಅನುಕೂಲಕ್ಕಾಗಿ ಶಾಸಕ ಹರೀಶ್ ಪೂಂಜಾರವರು ಜೀಪಿನ ವ್ಯವಸ್ಥೆ ಮಾಡಿದ್ದು ಆದರೂ ಹಾನಿಯಾದ ರಸ್ತೆಯಿಂದ ಜೀಪು ಬರಲು ಹರಸಾಹಸ ಪಡಬೇಕಾಗಿದೆ. ಶೀಘ್ರ ಬ್ರಿಡ್ಜ್ ನಿರ್ಮಾಣಗೊಂಡರೆ ನಮ್ಮ ಸಮಸ್ಯೆ ಪರಿಹಾರವಾಗಲಿದೆ.

ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಿಡಬ್ಲೂಡಿ ಬೆಳ್ತಂಗಡಿ