ಖತರ್ನಾಕ್ ಕಳ್ಳಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಖತರ್ನಾಕ್ ಕಳ್ಳಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

Jan 11, 2019 10:04:15 AM (IST)
ಖತರ್ನಾಕ್ ಕಳ್ಳಿಯನ್ನು ಬಂಧಿಸಿದ ಮೂಡುಬಿದಿರೆ ಪೊಲೀಸರು

ಮೂಡುಬಿದಿರೆ: ಮೂಡುಬಿದಿರೆಯ ವಿವಿದೆಡೆ ಪರ್ಸ್, ಚಿನ್ನ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಗುರುವಾರ ಸಂಜೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಶಾಫಿ ಅವರ ಪತ್ನಿ ಆಯಿಷಾ ಯಾನೆ ಸಮ್ರೀನ್(24)ಎಂದು ಗುರುತಿಸಲಾಗಿದೆ. ಈಕೆ ಮೂಡುಬಿದಿರೆಯ ಬನ್ನಡ್ಕದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು ಎನ್ನಲಾಗಿದೆ. ಗುರುವಾರ ಮಹಿಳೆಯೊಬ್ಬರು ಅಲಂಕಾರ್ ಫೈನಾನ್ಸ್‍ಗೆ ಚಿನ್ನ ಬಿಡಿಸಲು ಬಂದಿದ್ದಾಗ ಆರೋಪಿ ಮಹಿಳೆ ಗ್ರಾಹಕರ ಚೀಲದಲ್ಲಿದ್ದ ಪರ್ಸನ್ನು ಅಪಹರಿಸಿ ಪರಾರಿಯಾಗಿದ್ದರು. ಪರ್ಸ್‍ನಲ್ಲಿ ಸುಮಾರು ರೂ 13 ಸಾವಿರ ನಗದು ಇತ್ತು. ಈ ಬಗ್ಗೆ ಮಹಿಳೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದರು.

ಮೂಡುಬಿದಿರೆಯಲ್ಲಿ ಕಳೆದ ಕೆಲ ದಿನಗಳಿಂದ ಪರ್ಸ್, ಚಿನ್ನ ಕಳ್ಳತನದ ಬಗ್ಗೆ ವ್ಯಾಪಕ ದೂರುಗಳಿದ್ದು ಈ ಬಗ್ಗೆ ಪೊಲೀಸರು ನಿಗಾ ವಹಿಸಿದ್ದರು. ಅಲಂಕಾರ್ ಫೈನಾನ್ಸ್‍ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿ ಮಹಿಳೆ ಪರ್ಸ್ ಕಳ್ಳತನ ಮಾಡುತ್ತಿದ್ದ ದೃಶ್ಯ ಸೆರೆಯಾಗಿತ್ತು. ಇದನ್ನು ಆಧರಿಸಿ ಮೂಡುಬಿದಿರೆ ಪೊಲೀಸರುಗಳಾದ ಅಖಿಲ್ ಅಹ್ಮದ್, ಸಂತೋಷ್, ಯಶೋಧಾ, ಮನ್ಸೂರ್ ಹಾಗೂ ರಾಜೇಶ್ ಕಾರ್ಯಾಚರಣೆ ನಡೆಸಿ ಬಸ್‍ನಿಲ್ದಾಣದಲ್ಲಿ ಕಳ್ಳಿಯನ್ನು ಬಂಧಿಸುವಲ್ಲಿ ಸಫಲರಾದರು. ಕೆಲ ದಿನಗಳ ಹಿಂದೆ ಸಿಹೆಚ್ ಮೆಡಿಕಲ್ ಬಳಿ ಗ್ರಾಹಕರೊಬ್ಬರ ರೂ 21 ಸಾವಿರ ಕಳ್ಳತನ ಮಾಡಿದ್ದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ರೂ 34 ಸಾವಿರ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಮೂಡುಬಿದಿರೆ ಕೋರ್ಟ್‍ಗೆ ಹಾಜರುಪಡಿಸಿದ್ದಾರೆ.

ಸಿಸಿ ಕ್ಯಾಮರಾ ವೈಫಲ್ಯ: ಕಳೆದ ಹಲವು ವಾರಗಳಿಂದ ಈ ರೀತಿಯ ಕಳ್ಳತನದ ಬಗ್ಗೆ ದೂರುಗಳು ಬರುತ್ತಲೇ ಇದ್ದು ಕೆಲವೊಂದು ಘಟನೆಗಳ ಕುರಿತಾಗಿಯೂ ಪೇಟೆಯಲ್ಲಿ ಬಸ್ ನಿಲ್ದಾಣ ಸಹಿತ ಹಲವೆಡೆ ಸಿಸಿ ಕ್ಯಾಮರಾಗಳಿರುವತ್ತ ಧಾವಿಸಿ ಬಂದವರಿಗೆ ಈ  ಸಿಸಿ ಕ್ಯಾಮರಾಗಳು ಕಣ್ಣು ಮುಚ್ಚಿರುವುದು ನಿರಾಶೆಗೆ ಕಾರಣವಾಗಿದೆ. ಅಪರಾಧ ಪ್ರಕರಣಗಳು, ಅಹಿತಕರ ಘಟನೆಗಳು ನಡೆದಾಗ ಅಮೂಲ್ಯ ಚಿತ್ರಣ ನೀಡಬಲ್ಲ ಇವುಗಳು ನಿರ್ವಹಣೆಯಿಲ್ಲದೇ ಇರುವುದು ವ್ಯವಸ್ಥೆ ಅವ್ಯವಸ್ಥೆಯಾಗಿ ಬದಲಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ.