ಯಾರಿಗೂ ಟಿಕೆಟ್ ನೀಡುವಂತೆ ಒತ್ತಾಯ ಮಾಡಿಲ್ಲ: ಅನಂತಕುಮಾರ್

ಯಾರಿಗೂ ಟಿಕೆಟ್ ನೀಡುವಂತೆ ಒತ್ತಾಯ ಮಾಡಿಲ್ಲ: ಅನಂತಕುಮಾರ್

SB   ¦    Apr 16, 2018 08:10:38 PM (IST)
ಯಾರಿಗೂ ಟಿಕೆಟ್ ನೀಡುವಂತೆ ಒತ್ತಾಯ ಮಾಡಿಲ್ಲ: ಅನಂತಕುಮಾರ್

ಕಾರವಾರ: ಜಿಲ್ಲೆಯಲ್ಲಿ ತಾನು ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸುವಂತೆ ತಾನೆಂದೂ ಒತ್ತಾಯ ಮಾಡಿಲ್ಲ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಸ್ಪಷ್ಟ ಪಡಿಸಿದ್ದಾರೆ.

ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರ ನಡೆಸಲು ಆಗಮಿಸಿದ ಅವರು, ಪ್ರಚಾರ ಕಾರ್ಯದ ಪೂರ್ವದಲ್ಲಿ ಬಿಜೆಪಿ ಸಭೆ ನಡೆಸಿದರು. ಈ ಮಧ್ಯೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂಥವರಿಗೆ ಟಿಕೆಟ್ ನೀಡಿ ಎಂದು ಹೇಳುವ ಸಂಸ್ಕೃತಿ ಹಾಗೂ ಸಂಸ್ಕಾರ ನಮ್ಮದಲ್ಲ. ಹೈಕಮಾಂಡ್ ಯಾರನ್ನೇ ಅಭ್ಯರ್ಥಿ ಎಂದು ತೀರ್ಮಾನ ಮಾಡಿದರೂ ಕೂಡ ಅವರನ್ನೇ ಗೆಲ್ಲಿಸುವ ಜವಾಬ್ದಾರಿ ನಮ್ಮದು.

ಇಂತಹ ಮಾಧ್ಯಮಗಳ ಕಪೋಲ ಕಲ್ಪಿತ ಕಲ್ಪನೆಗಳು ಸಾರ್ವಜನಿಕರಲ್ಲಿ ಈ ಗೊಂದಲವನ್ನು ಮಾಡಿಕೊಟ್ಟಿವೆ. ಇದಕ್ಕೂ ನನಗೂ ಸಂಬಂಧವಿಲ್ಲ ಎಂದ ಅವರು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧ ದಿನೇಶ್ ಗುಂಡುರಾವ್ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯು ಗುಂಡುರಾವ್ ಅವರ ಹಾಗೂ ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೌಶಲ್ಯಾಭಿವೃದ್ಧಿ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಟೀಕಿಸಿದರು.

ಕರ್ನಾಟಕದಲ್ಲಿ ಇತ್ತೀಚೆಗೆ 24ಕ್ಕೂ ಹೆಚ್ಚು ನಮ್ಮ ಕಾರ್ಯಕರ್ತರು ಹೇಗೆ ಕಗ್ಗೊಲೆಗಳಾದರು? ಎನ್ನುವುದನ್ನು ಗುಂಡುರಾವ್ ಅವರ ಹೇಳಿಕೆಗಳು ಸ್ಪಷ್ಟ ಪಡಿಸುತ್ತವೆ. ಈ ತರಹ ಭಾಷೆಯನ್ನು ಬಳಸಿರುವ ಬಗ್ಗೆ ಈಗ ಅವರು ಖೇದವನ್ನು ಸಹ ವ್ಯಕ್ತ ಪಡಿಸಿದ್ದಾರೆ. ಇಂತಹ ಭಾಷೆ ಮರುಕಳಿಸದೇ ಇರಲಿ ಎನ್ನುವುದು ನಮ್ಮ ಅಪೇಕ್ಷೆಯಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರಜಾಸತ್ತಾತ್ಮಕವಾದ ರೀತಿಯಲ್ಲಿಯೇ ಸಾರ್ವಜನಿಕರು ಉತ್ತರ ನೀಡುತ್ತಾರೆ ಎಂದರು.
ಸಿದ್ಧರಾಮಯ್ಯನವರ ಎರಡು ಕ್ಷೇತ್ರಗಳ ಟಿಕೇಟ್ ನೀಡುವ ಬೇಡಿಕೆಯನ್ನು ಹೈಕಮಾಂಡ್ ಸಾರಾಸಗಟವಾಗಿ ತಿರಸ್ಕರಿಸಿದೆ. ಇದರಿಂದ ಕಂಗಾಲಾಗಿರುವ ಸಿದ್ದರಾಮಯ್ಯ ಮುಂಚೆಯೇ ಓಡಿ ಬಂದಿದ್ದಾರೆ. ಕಾಂಗ್ರೆಸ್ ಇಂದು ತನ್ನ ಜವಾಬ್ದಾರಿಯುತ ಸ್ಥಾನದಿಂದಲೂ ಕಂಗೆಟ್ಟಿದೆ. ಈ ರೀತಿಯ ಸಂದರ್ಭದಲ್ಲಿ ಬಿಜೆಪಿಯ ಗೆಲುವು ಸುಲಭವಾಗಿದ್ದು ಖಂಡಿತವಾಗಿಯೂ ಗೆಲ್ಲುವ ವಿಶ್ವಾಸ ನಮಗಿದೆ ಎಂದರು.