ಸುಳ್ಯದಲ್ಲಿ ನಾಲ್ಕನೇ ಬಾರಿ ಅಂಗಾರ- ಡಾ.ರಘು ಮಧ್ಯೆ ಹೋರಾಟ

ಸುಳ್ಯದಲ್ಲಿ ನಾಲ್ಕನೇ ಬಾರಿ ಅಂಗಾರ- ಡಾ.ರಘು ಮಧ್ಯೆ ಹೋರಾಟ

GK   ¦    Apr 16, 2018 06:42:35 PM (IST)
ಸುಳ್ಯದಲ್ಲಿ ನಾಲ್ಕನೇ ಬಾರಿ ಅಂಗಾರ- ಡಾ.ರಘು ಮಧ್ಯೆ ಹೋರಾಟ

ಸುಳ್ಯ: ಮೀಸಲು ಕ್ಷೇತ್ರವಾದ ಸುಳ್ಯದಲ್ಲಿ ಎಸ್.ಅಂಗಾರ-ಡಾ.ಬಿ.ರಘು ಮಧ್ಯೆ ಹೋರಾಟಕ್ಕೆ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಎರಡು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡಿದ್ದು ಬಿಜೆಪಿ ಅಭ್ಯರ್ಥಿಯಾಗಿ ಎಸ್.ಅಂಗಾರ ಸತತ ಏಳನೇ ಬಾರಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ.ಬಿ.ರಘು ನಾಲ್ಕನೇ ಬಾರಿ ಸ್ಪರ್ಧೆಗಿಳಿದಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಸತತ ನಾಲ್ಕು ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ ಎಂಬುದು ವಿಶೇಷತೆ. 

ಇವರು ಪರಸ್ಪರ ಎದುರಾದ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಎಸ್.ಅಂಗಾರ ಜಯಭೇರಿ ಬಾರಿಸಿದ್ದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಅಂಗಾರರಿಗೆ 61,480 ಮತ ದೊರೆತಿದ್ದರೆ ರಘು ಅವರಿಗೆ 44,395 ಮತ ಪಡೆದಿದ್ದರು. ಗೆಲುವಿನ ಅಂತರ 17,085 ಮತಗಳು, 2008ರಲ್ಲಿ ಅಂಗಾರರಿಗೆ 61,114 ಮತಗಳು ಮತ್ತು ಡಾ.ರಘು ಅವರಿಗೆ 56,822 ಮತಗಳು ಬಂದಿತ್ತು. ಗೆಲುವಿನ ಅಂತರ 4,292 ಮತಗಳಾದರೆ 2013ರಲ್ಲಿ 1373 ಮತಗಳ ಅಂತರದಲ್ಲಿ ಅಂಗಾರ ಜಯ ಗಳಿಸಿದ್ದರು. ಅಂಗಾರರಿಗೆ 65,913 ಮತಗಳು ಬಂದಿದ್ದರೆ, ರಘು 64,540 ಮತ ಪಡೆದಿದ್ದರು. ಡಾ.ರಘು ಅವರಿಗೆ ಇದು ನಾಲ್ಕನೇ ಸ್ಪರ್ಧೆ, ಕಾರ್ಮಿಕ ಇಲಾಖೆಯ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ.ರಘು ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದರು. ಅಂಗಾರರಿಗೆ ಇದು ಏಳನೇ ಸ್ಪರ್ಧೆ. 1989ರಿಂದ ನಡೆದ ಎಲ್ಲಾ ಚುನಾವಣೆಯಲ್ಲಿಯೂ ಕಣದಲ್ಲಿರುವ ಅಂಗಾರ 1989ರ ಪ್ರಥಮ ಚುನಾವಣೆಯಲ್ಲಿ ಪರಾಜಿತರಾಗಿದ್ದರು. ಬಳಿಕ 1994. 1998, 2004, 2008, 2013ರ ಚುನಾವಣೆಯಲ್ಲಿ ಗೆದ್ದು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಎರಡು ಪ್ರಮುಖ ಪಕ್ಷಗಳು ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡಿದ್ದು ಉಳಿದ ಪಕ್ಷಗಳ ಅಭ್ಯರ್ಥಿಗಳ ಘೋಷಣೆ ಇನ್ನಷ್ಟೇ ಆಗಬೇಕಾಗಿದೆ.

20ಕ್ಕೆ ಅಂಗಾರ, 19ಕ್ಕೆ ಡಾ.ರಘು ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಶಾಸಕ ಎಸ್.ಅಂಗಾರ ಎ.20ರಂದು ನಾಮಪತ್ರ ಸಲ್ಲಿಸಲಿದ್ದಾರೆ. ನಗರದಲ್ಲಿ ಮೆರವಣಿಗೆ ನಡೆಸಿ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ನಾಮಪತ್ರ ಸಲ್ಲಿಸುವರು ಎಂದು ಬಿಜೆಪಿ ಪ್ರಮುಖರು ತಿಳಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಬಿ.ರಘು ಎ.19ರಂದು ನಾಮಪತ್ರ ಸಲ್ಲಿಸುವರು. ಕಾರ್ಯಕರ್ತರ ಜೊತೆ ಕಾಲ್ನಡಿಗೆ ಜಾಥಾದಲ್ಲಿ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವರು ಎಂದು ಪ್ರಕಟಣೆ ತಿಳಿಸಿದೆ.