ಗ್ರಾಮ ಪಂಚಾಯತ್ ಪಿಡಿಒ ಶೌಚಾಲಯದಲ್ಲಿ ಆತ್ಮಹತ್ಯೆ

ಗ್ರಾಮ ಪಂಚಾಯತ್ ಪಿಡಿಒ ಶೌಚಾಲಯದಲ್ಲಿ ಆತ್ಮಹತ್ಯೆ

MK   ¦    Jun 13, 2018 12:18:09 PM (IST)
ಗ್ರಾಮ ಪಂಚಾಯತ್ ಪಿಡಿಒ ಶೌಚಾಲಯದಲ್ಲಿ ಆತ್ಮಹತ್ಯೆ

ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಕಟ್ಟಡದ ಶೌಚಾಲಯದಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಸುರತ್ಕಲ್ ಹೊನ್ನಕಟ್ಟೆ ನಿವಾಸಿ ಕೃಷ್ಣಸ್ವಾಮಿ ಬಿ.ಎಸ್(42) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ಬೆಳಗ್ಗೆ 9.30ರ ವೇಳೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಹಾಜರಾತಿ ದಾಖಲಿಸಿ, ತಮ್ಮ ಕಚೇರಿಯೊಳಗೆ ಡೆತ್ ನೋಟ್ ಬರೆದಿಟ್ಟು, ಶೌಚಾಲಯದೊಳಕ್ಕೆ ತೆರಳಿ ನೈಲಾನ್ ಹಗ್ಗವನ್ನು ಕಿಟಕಿಗೆ ಕಟ್ಟಿ ಆತ್ಮಹತ್ಯೆ ನಡೆಸಿದ್ದಾರೆ. ಇದೇ ವೇಳೆ ಪಂಚಾಯಿತಿನೊಳಗೆ ಇಬ್ಬರು ಸಿಬ್ಬಂದಿಗಳಿದ್ದು, ಅರ್ಧ ಗಂಟೆಯಾದರೂ ಶೌಚಾಲಯದಿಂದ ವಾಪಸ್ಸಾಗದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ ಕಿಟಕಿಯಲ್ಲಿ ಹಗ್ಗ ಕಾಣಿಸಿಕೊಂಡಿತ್ತು. ಇಬ್ಬರು ಸಿಬ್ಬಂದಿ ಕೂಗಿ ಕರೆದರೂ ಬಾಗಿಲು ತೆರೆಯದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯರನ್ನು ಕರೆದು ಬಾಗಿಲು ಒಡೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

2017ರ ಆಗಸ್ಟ್ ತಿಂಗಳಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ನೇಮಕಗೊಂಡಿದ್ದರು. ಆದರೆ ವಿಪರೀತ ಕುಡಿತವನ್ನು ಅಭ್ಯಾಸ ಮಾಡಿಕೊಂಡಿದ್ದ ಇವರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೆ ಆಗಾಗ್ಗ ರಜೆ ಮಾಡಿಕೊಳ್ಳುತ್ತಾ ಬಂದಿದ್ದರು. ಮೂರು ತಿಂಗಳ ಹಿಂದೆ ಪತ್ನಿ ಇವರನ್ನು ಮದ್ಯವರ್ಜನ ಶಿಬಿರಕ್ಕೆ ದಾಖಲು ಮಾಡಿದ್ದರು. ಅಲ್ಲಿಂದ ವಾಪಸ್ಸಾಗಿಯೂ ವ್ಯಸನವನ್ನು ಬಿಡದೇ ಇದ್ದಾಗ ಕಂಕನಾಡಿಯ ಕೌನ್ಸಿಲಿಂಗ್ ಕೇಂದ್ರಕ್ಕೂ ದಾಖಲಿಸಿದ್ದರು. ಅಲ್ಲಿಂದ ವ್ಯಸನವನ್ನು ಬಿಟ್ಟಿದ್ದ ಅಭಿವೃದ್ಧಿ ಅಧಿಕಾರಿ ಕೈಕಾಲು ನಡುಕದಿಂದಾಗಿ ಪಂಚಾಯಿತಿನಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಇತರೆ ಸಿಬ್ಬಂದಿ ಜತೆಗೆ ದೂರಿದ್ದರು. ಸ್ಥಳೀಯ ಜನಪ್ರತಿನಿಧಿಗಳು ಕೂಡಾ ಮೇಲಾಧಿಕಾರಿಗಳಿಗೆ ದೂರು ಸಹ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇಲಾಧಿಕಾರಿಯವರು ಇಂದಿನಿಂದ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದರು. ಆದರೆ ತಾಲೂಕು ಕಚೇರಿಗೆ ತೆರಳದೆ, ಮುನ್ನೂರು ಪಂಚಾಯಿತಿಗೆ ಬೇಗನೇ ಬಂದಿದ್ದ ಪಿಡಿಓ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಕಚೇರಿಯ ಟೇಬಲ್ ನಲ್ಲಿ ಬರೆದಿಟ್ಟಿರುವ ಡೆತ್ ನೋಟಲ್ಲಿ ಸಹೋದರ ಕುಮಾರಸ್ವಾಮಿ ಮತ್ತು ಪತ್ನಿಯ ದೂರವಾಣಿ ಸಂಖ್ಯೆಯನ್ನು ಬರೆದಿಟ್ಟು, ಬಳಿಕ ತನ್ನ ಸಾವಿಗೆ ತಾನೇ ಕಾರಣವೆಂದು ಹೇಳಿದ್ದಾರೆ. ತೀರಿಕೊಂಡ ಬಳಿಕ ಸರಕಾರಿ ಕೆಲಸವನ್ನು ಪತ್ನಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವಳು ಮತ್ತು ಮಗಳು ಬದುಕಲು ದಾರಿ ಮಾಡಿಕೊಡುವಂತೆ ಕೋರಿದ್ದಾರೆ.

More Images