ಅಕ್ರಮ ಜೂಜು ಅಡ್ಡೆ, ಮದ್ಯ ಮಾರಾಟ ವಿರುದ್ಧ ಕ್ರಮಕ್ಕೆ ಹರೀಶ್ ಪೂಂಜ ಸೂಚನೆ

ಅಕ್ರಮ ಜೂಜು ಅಡ್ಡೆ, ಮದ್ಯ ಮಾರಾಟ ವಿರುದ್ಧ ಕ್ರಮಕ್ಕೆ ಹರೀಶ್ ಪೂಂಜ ಸೂಚನೆ

DA   ¦    Jun 13, 2018 05:29:26 PM (IST)
ಅಕ್ರಮ ಜೂಜು ಅಡ್ಡೆ, ಮದ್ಯ ಮಾರಾಟ ವಿರುದ್ಧ ಕ್ರಮಕ್ಕೆ ಹರೀಶ್ ಪೂಂಜ ಸೂಚನೆ

ಬೆಳ್ತಂಗಡಿ: ಚುನಾವಣೆ ನಡೆದು ಒಂದು ತಿಂಗಳ ಬಳಿಕ ಶಾಸಕ ಹರೀಶ್ ಪೂಂಜ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಆಡಳಿತಕ್ಕೆ ಅಧಿಕೃತವೆಂಬಂತೆ ಚಾಲನೆ ನೀಡಿದರು.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗುವ ಹಾನಿಯನ್ನು ತಡೆಯಲು ಮುನ್ನೆಚ್ಚರಿಕೆ ಬಗ್ಗೆ, ಸರಕಾರಿ ಸೌಲಭ್ಯಗಳ ಬಗ್ಗೆ, ಶ್ರದ್ಧಾ ಕೇಂದ್ರಗಳ ಬಗ್ಗೆ, ವಿದ್ಯುತ್, ಸರಕಾರಿ ಬಸ್ ಗಳು, ಸರಕಾರಿ ಆಸ್ಪತ್ರೆಯ ಇತ್ಯಾದಿ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಎಚ್ಚರಿಕೆ, ಮಾರ್ಗದರ್ಶನ ನೀಡಿದರು.

ತಾಲೂಕಿನಲ್ಲಿ ನಿರಂತರ ಸುರಿಯುತ್ತಿರುವ ಮಳೆ ಹಾನಿ ಬಗ್ಗೆ ಪರಿಹಾರ ಮತ್ತು ತಾಲೂಕಿನ ಸಮಗ್ರ ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದರು. ಅಧಿಕಾರಿಗಳು ಜನರ ಬಳಿ ತೆರಳಿ ಜನರಿಗೆ ಸೌಲಭ್ಯ ಒದಗಿಸಲು ಮುಂದಾಗಬೇಕು. ಶಾಸಕರಿಗೆ ತೃಪ್ತಿಯಾಗಿಸಲು ಸುಳ್ಳು ಮಾಹಿತಿಯನ್ನು ಎಂದೂ ನೀಡಬೇಡಿ, ಜನರಿಗೆ ಸರಕಾರದ ಸೌಲಭ್ಯಗಳ ಮಾಹಿತಿಯನ್ನು ಕ್ಷಣ ಕ್ಷಣ ನೀಡಬೇಕು. ತಾಲೂಕು ಕಚೇರಿಯಲ್ಲಿ ಜನರನ್ನು ಕಾಯಿಸುವಂತಹ ಕಾರ್ಯಕ್ಕೆ ಮುಂದಾಗಬೇಡಿ ಜನರಿಂದ ಹಣ ಪಡೆದು ಕೆಲಸ ಮಾಡುವುದಕ್ಕೆ ಇಂದಿನಿಂದಲೇ ಕಡಿವಾಣ ಹಾಕಬೇಕು. ಜನರು ಅಧಿಕಾರಿಗಳ ಬಗ್ಗೆ ದೂರು ನೀಡಿದರೆ ತಕ್ಷಣ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಸಿದರು.

ತಾಲೂಕಿಗೆ ಒಳ್ಳೆಯ ಹೆಸರಿದ್ದು ಪವಿತ್ರ ಶ್ರದ್ದಾ ಕೇಂದ್ರಗಳನ್ನು ಹೊಂದಿದ ತಾಲೂಕು. ತಾಲೂಕಿನಲ್ಲಿ ಕೆಲವು ಕಡೆ ಅಕ್ರಮ ಜೂಜು ಅಡ್ಡೆ, ಅಕ್ರಮ ಮದ್ಯ ಮಾರಾಟ, ಅಕ್ರಮ ವೇಶ್ಯಾವಾಟಿಕೆ ಅಡ್ಡೆಗಳು ಇರುವ ಬಗ್ಗೆ ಮಾಹಿತಿಗಳು ಬರುತ್ತಿದ್ದು ತಕ್ಷಣ ಒಂದು ವಾರದಲ್ಲಿ ಇವುಗಳನ್ನು ಪತ್ತೆ ಹಚ್ಚಿ ಕಡಿವಾಣ ಹಾಕಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು. ಇದಕ್ಕೆ ಪೂರಕವಾಗಿ ಸಹಾಯಕ ಕಮಿಷನರ್ ಕೃಷ್ಣಮೂರ್ತಿ ಮಾತನಾಡಿ ಅಕ್ರಮ ಮದ್ಯ ಪತ್ತೆಗೆ ಅಬಕಾರಿ ಇಲಾಖೆ ತಂಡವನ್ನು ರಚಿಸಬೇಕು. ಅಗತ್ಯವಿದ್ದರೆ ಬೇರೆ ತಾಲೂಕುಗಳಿಂದ ಹೆಚ್ಚುವರಿ ಸಿಬ್ಬಂದಿಗಳನ್ನು ಕಳುಹಿಸಲಾಗುವುದು ಎಂದರು.

ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಬಾರದಂತೆ ನೋಡಿಕೊಳ್ಳಿ ವಿದ್ಯುತ್ ದುರಸ್ಥಿ ಇರುವಾಗ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ವಿದ್ಯುತ್ ಕಂಬಗಳಿಗೆ ಹಾನಿಯಾದಾಗ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಸುಲಭವಾಗುವಂತೆ ಅಲ್ಲಲ್ಲಿ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಬೇಕು ಎಂದು ಮೆಸ್ಕಾಂ ಇಲಾಖೆಗೆ ಸೂಚಿಸಿದರು.