ವಿದ್ಯುತ್ ಕಂಬ ಅಳವಡಿಕೆ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ: ಇಬ್ಬರು ಸಾವು

ವಿದ್ಯುತ್ ಕಂಬ ಅಳವಡಿಕೆ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ: ಇಬ್ಬರು ಸಾವು

GK   ¦    May 15, 2018 08:48:01 PM (IST)
ವಿದ್ಯುತ್ ಕಂಬ ಅಳವಡಿಕೆ ಮಾಡುತ್ತಿದ್ದ ವೇಳೆ ವಿದ್ಯುತ್ ಅವಘಡ: ಇಬ್ಬರು ಸಾವು

ಸುಳ್ಯ: ಸುಳ್ಯ ತಾಲೂಕಿನ ಕನಕಮಜಲಿನಲ್ಲಿ 33 ಕೆ.ವಿ ವಿದ್ಯುತ್ ಲೈನ್ ನ ಹೊಸ ತಂತಿ ಮತ್ತು ಕಂಬ ಅಳವಡಿಕೆ ಕಾಮಗಾರಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಲೈನ್ ಗೆ ಕಂಬ ತಾಗಿ ವಿದ್ಯುತ್ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಭವಿಸಿದೆ.

ಬಂಟ್ವಾಳದ ಪಾದೆಕಲ್ಲು ನಿವಾಸಿ ಕ್ರೇನ್ ಚಾಲಕ ಗಣೇಶ್ (25) ಮತ್ತು ಸಜಿಪಮೂಡ ನಿವಾಸಿ ಅಲ್ವಿನ್ (35) ಮೃತಪಟ್ಟವರು. ಕ್ರೇನ್ ಮೂಲಕ ಕಂಬ ಅಳವಡಿಕೆ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಮಂಗಳವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ಕಂಬವನ್ನು ಕ್ರೇನ್ ಮುಖಾಂತರ ಮೇಲೆತ್ತುತ್ತಿದ್ದ ಸಂದರ್ಭದಲ್ಲಿ ಕಂಬ ಜಾರಿ ಹಳೆಯ ವಿದ್ಯುತ್ ಲೈನ್ ಗೆ ಸ್ಪರ್ಶಿಸಿದಾಗ ಲೈನ್ ತುಂಡಾಗಿ ವಿದ್ಯುತ್ ಹರಿದು ಅಲ್ವಿನ್ ಮತ್ತು ಕ್ರೇನ್ ಚಾಲಕ ಗಣೇಶ್ಗೆ ವಿದ್ಯುತ್ ಸ್ಪರ್ಶಿಸಿ ಅವಘಡ ಸಂಭವಿಸಿದೆ ಎಂದು ಸುಳ್ಯ ಪೊಲೀಸರು ತಿಳಿಸಿದ್ದಾರೆ.

ತಕ್ಷಣ ಇವರನ್ನು ಪುತ್ತೂರಿನ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಮೃತಪಟ್ಟಿದ್ದರು. ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.