ಬಿಜೆಪಿ ಬೆನ್ನಿಗಿದೆ ಮಾಧ್ಯಮಗಳ ಬೆಂಬಲ: ಸಚಿವ ಪುಟ್ಟರಾಜು ಗರಂ

ಬಿಜೆಪಿ ಬೆನ್ನಿಗಿದೆ ಮಾಧ್ಯಮಗಳ ಬೆಂಬಲ: ಸಚಿವ ಪುಟ್ಟರಾಜು ಗರಂ

SV   ¦    Sep 14, 2018 07:35:51 PM (IST)
ಬಿಜೆಪಿ ಬೆನ್ನಿಗಿದೆ ಮಾಧ್ಯಮಗಳ ಬೆಂಬಲ: ಸಚಿವ ಪುಟ್ಟರಾಜು ಗರಂ

ಉಡುಪಿ: ರಾಜ್ಯದಲ್ಲಿ ಬಿಜೆಪಿಗೆ ಮಾಧ್ಯಮಗಳ ಬೆಂಬಲ ಜಾಸ್ತಿಯಾಗಿದೆ. ಹಾಗಾಗಿ ಇಲ್ಲದ ಕಥೆಕಟ್ಟಿ ಬಿಜೆಪಿಯವರು ಹಾರಾಡುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಸ್ವಲ್ಪ ಗರಂ ಆಗಿಯೇ ನುಡಿದರು.

ಕರಾವಳಿ ಪ್ರವಾಸದಲ್ಲಿರುವ ಅವರು, ಶುಕ್ರವಾರ ಉಡುಪಿಗೆ ಆಗಮಿಸಿ ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲ. ನಮ್ಮ ಸರ್ಕಾರ ಐದು ವರ್ಷ ಸುಭದ್ರ. ಯಾವನಿಂದಲೂ ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಶಾಸಕರ್ಯಾರೂ ಬಿಜೆಪಿಗೆ ಹೋಗಲ್ಲ ಎಂದರು.

ಮೋದಿ ಬಗ್ಗೆ ಅಸಮಾಧಾನ..
ಪ್ರಧಾನಿ ಮೋದಿ ಉದ್ದುದ್ದ ಭಾಷಣ ಮಾಡ್ತಾರೆ. ಕ್ಲಬ್ ನಲ್ಲಿ ದಂಧೆ ಮಾಡುವವರ ದುಡ್ಡು ಬಳಸ್ತಾ ಇದ್ದಾರೆ. ಬಡಬಗ್ಗರ ಹಣ ಲೂಟಿ ಮಾಡುವವರ ದುಡ್ಡು ಬಳಸ್ತಿದ್ದಾರೆ. ಬಿಜೆಪಿಗೆ ಇಂತಹ ದುಸ್ಥಿತಿ ಬಂದಿರೋದು ದೌರ್ಭಾಗ್ಯ ಎಂದು ಹೇಳಿದರು.

ಮಂಡ್ಯದಲ್ಲಿ ಜೆಡಿಎಸ್ ಶಾಸಕನಿಗೆ ಬಲೆ?
ಮಂಡ್ಯದ ಶಾಸಕರ ಶರ್ಟ್ ಮುಟ್ಟಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರ ಬೆನ್ನಿಗೆ ಬೆನ್ನಾಗಿ ನಿಂತಿದ್ದಾರೆ ಅಲ್ಲಿನ ಜನ. ಬಿಜೆಪಿಯವರನ್ನು ಸಾಕಷ್ಟು ಗಿರಕಿ ಹೊಡೆಸಿದ್ದೇವೆ. ಮಂಡ್ಯದ ಶಾಸಕರು ಸಿಎಂ ಗೆ ಬಾಡಿಗಾರ್ಡ್ ಗಳು. ನಮ್ಮನ್ನು ಯಾರಿಂದಲೂ ಮುಟ್ಟೋದಕ್ಕೆ ಸಾಧ್ಯವಿಲ್ಲ ಎಂದು ಪುಟ್ಟರಾಜು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅವರು ಬಂದ ಕೂಡಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಾಗುವುದು. ನನಗೆ ಸಣ್ಣ ನೀರಾವರಿ ಖಾತೆಯಲ್ಲಿ ಖುಷಿಯಿದೆ. ಬೇರೆ ಪದವಿಗೆ ನಾನು ವ್ಯಾಮೋಹಿಸಿಲ್ಲ ಎಂದರು.