ಮನೆಗೆ ನುಗ್ಗಿ ಕಳವುಗೈದ ಆರೋಪಿ ಸೆರೆ

ಮನೆಗೆ ನುಗ್ಗಿ ಕಳವುಗೈದ ಆರೋಪಿ ಸೆರೆ

MV   ¦    Jan 12, 2018 07:36:54 PM (IST)
ಮನೆಗೆ ನುಗ್ಗಿ ಕಳವುಗೈದ ಆರೋಪಿ ಸೆರೆ

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹಿಂಬಾಗಿಲು ಮುರಿದು, ಅಡಿಗೆ ಮನೆಯ ಅಕ್ಕಿ ಡಬ್ಬದಿಂದ ಸುಮಾರು 44 ಪವನ್ ಬಂಗಾರದ ಆಭರಣಗಳನ್ನು ಕಳವುಗೈದ ಪ್ರಕರಣದ ಮೂವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ವಿಟ್ಲ ಪೊಲೀಸರ ತಂಡ ಹಾಜರುಪಡಿಸಿದೆ.

ಒಕ್ಕೆತ್ತೂರು ಸುರಂಬಡ್ಕ ನಿವಾಸಿ ಮಹಮ್ಮದ್ ಅಶ್ರಫ್ (29) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ತನ್ನ ಸಂಬಂಧಿ ಒಬ್ಬನೊಂದಿಗೆ ಆಕ್ಟೀವಾ ಹೋಂಡಾದಲ್ಲಿ ಉಕ್ಕುಡ ದರ್ಬೆಯಲ್ಲಿನ ಪಿರ್ಯಾದಿ ಮನೆಗೆ ರಾತ್ರಿ ಸಮಯ ಬಂದು ಮನೆಯ ಹಿಂದಿನ ಬಾಗಿಲನ್ನು ಮುರಿದು ಅಡುಗೆ ಕೋಣೆಯಲ್ಲಿ ಅಕ್ಕಿಯ ಪಾತ್ರೆಯ ಒಳಗೆ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕಳವು ಗೈದ ಆಭರಣಗಳನ್ನು ಬಂಟ್ವಾಳ ಮತ್ತು ಮಂಗಳಪದವಿನ ಚಿನ್ನದ ಅಂಗಡಿಗೆ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಇದರ ಜತೆಗೆ ಅಂಗಡಿಗೆ ಮಾರಾಟ ಮಾಡಿದ ಕಾಗದ ಪತ್ರಗಳನ್ನು ಅಧಿಕಾರಿಗಳಿಗೆ ನೀಡಿದ್ದಾನೆನ್ನಲಾಗಿದೆ. ಸದ್ಯ 5 ಲಕ್ಷ ಮೌಲ್ಯದ ಚಿನ್ನಾಭರಣ, 10 ಲಕ್ಷ ಮೌಲ್ಯದ ಹುಂಡೈ ವರ್ನಾ ಕಾರು, 50 ಸಾವಿರ ಮೌಲ್ಯದ ಮೋಟಾರ್ ಸೈಕಲ್, 30 ಸಾವಿರ ನಗದು ಹಣ ಸೇರಿ ಒಟ್ಟು 15 ಲಕ್ಷದ 80 ಸಾವಿರ ರೂಪಾಯಿ ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ವಿ.ಜೆ., ಪೊಲೀಸ್ ಉಪಾಧೀಕ್ಷಕ ಶೀನಿವಾಸ ವಿ. ಎಸ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಎಂ. ಎಸ್. ನೇತೃತ್ವದಲ್ಲಿ ವಿಟ್ಲ ಠಾಣಾ ಉಪ ನಿರೀಕ್ಷಕ ನಾಗರಾಜ್ ಹೆಚ್. ಇ., ಪ್ರೋಬೆಷನರಿ ಪಿ.ಎಸ್.ಐ ಸೌಮ್ಯ, ಸಿಬ್ಬಂದಿಗಳಾದ ಜಯಕುಮಾರ್, ಬಾಲಕೃಷ್ಣ, ಗಿರೀಶ್, ಶ್ರೀಧರ, ರಮೇಶ್, ರಕ್ಷಿತ್, ಅಭಿಜಿತ್, ಲೋಕೇಶ, ಪ್ರವೀಣ್, ಜಗದೀಶ, ಸತೀಶ, ಬಿರೇಶ್, ಚಾಲಕರಾದ ರಘುರಾಮ, ವಿಜಯೇಶ್ವರ, ಗಣಕಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ತ್ ಕುಮಾರ್, ಹೋಂ ಗಾರ್ಡ್ ರಮೇಶ್ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.