ನೆರೆ ಸಂತ್ರಸ್ತನಿಗೆ ಗ್ರಾಮಕರಣಿಕರಿಂದ ನಿಂದನೆ ಆರೋಪ: ದೂರು ದಾಖಲು

ನೆರೆ ಸಂತ್ರಸ್ತನಿಗೆ ಗ್ರಾಮಕರಣಿಕರಿಂದ ನಿಂದನೆ ಆರೋಪ: ದೂರು ದಾಖಲು

MV   ¦    Aug 13, 2019 07:22:06 PM (IST)
ನೆರೆ ಸಂತ್ರಸ್ತನಿಗೆ ಗ್ರಾಮಕರಣಿಕರಿಂದ ನಿಂದನೆ ಆರೋಪ: ದೂರು ದಾಖಲು

ಬಂಟ್ವಾಳ: ಬಿ.ಮೂಡ ಗ್ರಾಮಕರಣಿಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟೋಪಚಾರಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ನೆರೆ ಸಂತ್ರಸ್ತರೊಬ್ಬರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ನೆರೆ ಸಂತ್ರಸ್ತ ಲತೀಫ್ ಬಿ.ಸಿ. ಎಂಬವರು ಈ ದೂರು ನೀಡಿದ್ದು, ಕಳೆದ ವಾರದಿಂದ ಭಾರೀ ಮಳೆಯಿಂದಾಗಿ ನೆರೆ ಬಂದು ತನ್ನ ಮನೆ ಸಹಿತ ಸುತ್ತಮುತ್ತಲಿನ ಮನೆಗಳೂ ಜಲಾವೃತಗೊಂಡಿತ್ತು. ಈ ನಿಟ್ಟಿನಲ್ಲಿ ಆ. 12ರಂದು ಬೆಳಗ್ಗೆ 11:30 ಗಂಟೆ ಸುಮಾರಿಗೆ ಗ್ರಾಮಕಣಿಕರು ಹಾಗೂ ಇತರ ಸಿಬ್ಬಂದಿ ತಲಪಾಡಿ ಪ್ರದೇಶದ ನೆರೆ ಸಂತ್ರಸ್ತರ ಸರ್ವೇ ಕಾರ್ಯಕ್ಕಾಗಿ ತಮ್ಮ ಮನೆಗೆ ಬಂದು ಅಜಿಗಳನ್ನು ಭರ್ತಿ ಮಾಡಿದ್ದಾರೆ. ಆದರೆ ಅಂದು ರಾತ್ರಿ 10:15 ಗಂಟೆ ಸುಮಾರಿಗೆ ವಿಎಯ ಹೆಸರಿನಲ್ಲಿ 86......60 ಮೊಬೈಲ್ ನಂಬರ್‌ನಿಂದ ತನಗೆ ಕರೆ ಮಾಡಿ, "ನೆರೆ ಬಂದ 14 ಮನೆಗಳಿಗೆ ಸರ್ವೇ ಮಾಡಲು ನಮಗೆ ನೀನು ಉಪಚರಿಸಿಲ್ಲ. ಅದಲ್ಲದೆ, ಕುಡಿಯಲು ಕೊಡಲು ಯೋಗ್ಯತೆ ಇಲ್ಲ. ನಿನಗೆ ಅಹಂಕಾರ ಇದೆ ಎಂದೇಳಿ" ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಇದರಿಂದ ಗೊಂದಲಗೊಂಡ ತಾನು ಈ ವಿಚಾರವಾಗಿ ಮತ್ತೆ ಅದೇ ನಂಬರ್‌ಗೆ ಕರೆ ಮಾಡಿದ್ದು, ಕರೆಯನ್ನು ನಿರಾಕರಿಸಿದ್ದಾರೆ. ನೆರೆಯಿಂದ ತನ್ನ ಮನೆ ಅವ್ಯವಸ್ಥೆಯಿಂದ ಕೂಡಿದ್ದು, ಶುಚಿ ಕಾರ್ಯವನ್ನು ಇನ್ನೂ ಮಾಡಿಲ್ಲ. ತಾನು ತನ್ನ ಕುಟುಂಬವು ಸಂಬಂಧಿಕರ ಮನೆಯಲ್ಲಿ ವಾಸವಾಗಿ ಅಲ್ಲಿಯೇ ಹಬ್ಬವನ್ನು ಮಾಡಿರುತ್ತೇವೆ, ಈಗಿರುವಾಗ ತಾನು ಇವರಿಗೆ ಹೇಗೆ ಊಟೋಪಚಾರ ಮಾಡಲಿ? ಇದರಿಂದ ನೆರೆ ಸಂತ್ರಸ್ತನಾದ ತಾನು ಮಾನಸಿಕವಾಗಿ ನೊಂದುಕೊಂಡಿದ್ದೇನೆ. ಆದ್ದರಿಂದ ತಾವು ಈ ಬಗ್ಗೆ ವಿಚಾರಣೆ ಮಾಡಿ ನ್ಯಾಯ ಒದಗಿಸಬೇಕಾಗಿ ಪೊಲೀಸ್ ದೂರಿನಲ್ಲಿ ಒತ್ತಾಯಿಸಲಾಗಿದೆ.

ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.