ಜನಸಂಖ್ಯೆ ಹೆಚ್ಚಾಗಿದೆ...ಸೇತುವೆ ಕಿರಿದಾಗಿದೆ...!

ಜನಸಂಖ್ಯೆ ಹೆಚ್ಚಾಗಿದೆ...ಸೇತುವೆ ಕಿರಿದಾಗಿದೆ...!

DA   ¦    Jan 11, 2019 08:03:15 PM (IST)
ಜನಸಂಖ್ಯೆ ಹೆಚ್ಚಾಗಿದೆ...ಸೇತುವೆ ಕಿರಿದಾಗಿದೆ...!

ಬೆಳ್ತಂಗಡಿ: ಕಡಿಮೆ ಜನಸಂಖ್ಯೆ ಇರುವಾಗ ಮತ್ತು ವಾಹನಗಳ ಓಡಾಟವೇ ಇರದಿದ್ದಾಗ ಸರಕಾರ ಕಿರು ಸೇತುವೆಯೊಂದನ್ನು ರಚಿಸಿತು. ಆದರೆ ಈಗ ಜನಸಾಂದ್ರತೆ ಹೆಚ್ಚಾಗಿದೆ. ಘನ, ಲಘುವಾಹನಗಳ ಓಡಾಟ ಹೆಚ್ಚಾಗಿದೆ. ಅಂದು ನಿರ್ಮಿಸಿದ ಸೇತುವೆ ಈಗ ಏನಕ್ಕೂ ಸಾಲದಾಗಿದೆ. ದೂರದೃಷ್ಟಿಯಿಲ್ಲದ ಸರಕಾರದ ನಡೆಯಿಂದಾಗಿ ಅಲ್ಲಿ ಮತ್ತೆ ಸೇತುವೆಯೊಂದನ್ನು ಅನಿವಾರ್ಯವಾಗಿ ನಿರ್ಮಿಸಬೇಕಾಗಿ ಬಂದಿದೆ. ಇಂತಹ ಸ್ಥಿತಿ ಇರುವುದು ಪ್ರಾಕೃತಿಕವಾಗಿ ಹಚ್ಚ ಹಸುರಿನ ಪರಿಸರದಿಂದ ಕೂಡಿರುವ, ಐತಿಹಾಸಿಕ ಪ್ರವಾಸಿತಾಣ ನರಸಿಂಹ ಗಡದ (ಗಡಾಯಿಕಲ್ಲು) ತಳಭಾಗದಲ್ಲಿ.

ಲಾಯಿಲ ಗ್ರಾ.ಪಂ.ವ್ಯಾಪ್ತಿಯ ಚಂದ್ಕೂರು-ಅಗರಿ ಪ್ರದೇಶವನ್ನು ಸಂಪರ್ಕಿಸುವ ಸೇತುವೆಯೊಂದು ಶಿಥಿಲಾವಸ್ಥೆಗೆ ತಲುಪಿರುವ ಜತೆಗೆ ಕಿರಿದಾಗಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಇದಿಗ ಬೇಡಿಕೆ ಕೇಳಿಬರುತ್ತಿದೆ.
ಹಾಲಿ ಸೇತುವೆಯ ನಡ ಗ್ರಾ.ಪಂ.ವ್ಯಾಪ್ತಿಯಲ್ಲಿದ್ದು, ನಡ ಹಾಗೂ ಲಾಯಿಲವನ್ನು ಸಂದಿಸುತ್ತಿದೆ. ಅದು ಅತಿ ಕಿರಿದಾದ ಸೇತುವೆಯಾಗಿರುವ ಕಾರಣ ಸಣ್ಣ ಪುಟ್ಟ ವಾಹನಗಳಿಗೆ ಮಾತ್ರ ಹೋಗಬಹುದಾಗಿದೆ. ಹೀಗಾಗಿ ದೊಡ್ಡ ವಾಹನಗಳಿಗೂ ತೆರಳುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೇತುವೆಯನ್ನು ಅಭಿವೃದ್ಧಿ ಪಡಿಸಬೇಕಾಗಿ ಗ್ರಾಮಸ್ಥರ ಒತ್ತಾಯವಾಗಿದೆ.

ಸೇತುವೆಯು ಕಿರಿದಾಗಿರುವುದಲ್ಲದೆ ಶಿಥಿಲಾವಸ್ಥೆಗೂ ತಲುಪಿದೆ. ಸೇತುವೆಯ ಇಕ್ಕೆಲಗಳಲ್ಲಿ ಒಂದು ಭಾಗದ ತಡೆಗೋಡೆಯು ಬಿದ್ದಿದ್ದು, ಅದನ್ನು ಕಬ್ಬಿಣದ ರಾಡ್ ಮೂಲಕ ದುರಸ್ತಿ ಮಾಡಲಾಗಿದೆ. ಸಾಮಾನ್ಯವಾಗಿ ಸೇತುವೆಗಳಿರುವಲ್ಲಿ ನದಿ ಮುಗಿದ ಬಳಿಕವೂ ತಡೆಗೋಡೆಯನ್ನು ಕೊಂಚ ವಿಸ್ತರಿಸಲಾಗಿರುತ್ತದೆ.

ಆದರೆ ಇಲ್ಲಿ ಕೇವಲ ನದಿ ಭಾಗಕ್ಕೆ ಮಾತ್ರ ತಡೆಗೋಡೆ ಹಾಕಲಾಗಿದ್ದು, ಉಳಿದಂತೆ ಅಪಾಯದ ಸ್ಥಿತಿ ಇದೆ. ಸೇತುವೆ ಕಿರಿದಾಗಿರುವ ಪರಿಣಾಮ ಏಕಕಾಲದಲ್ಲಿ ಒಂದು ಬದಿಯಲ್ಲಿ ಮಾತ್ರ ವಾಹನ ತೆರಳುವುದಕ್ಕೆ ಅವಕಾಶವಿದೆ. ಇದರಿಂದ ನಡೆದು ಹೋಗುವುದಕ್ಕೂ ಹೆದರುವ ಪರಿಸ್ಥಿತಿ ಇದೆ.

ಕುತ್ರೊಟ್ಟು ಜಂಕ್ಷನ್‍ನಿಂದ ಈ ರಸ್ತೆಯು ಚಂದ್ಕೂರು ಮೂಲಕ ಅಗರಿ ಭಾಗವನ್ನು ಸಂಪರ್ಕಿಸುತ್ತದೆ. ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿರುವ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ಇದೇ ರಸ್ತೆಯ ಮೂಲಕ ಸಂಪರ್ಕಿಸಬೇಕಿದೆ. ಹಿಂದೊಮ್ಮೆ ಇಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಯುತ ಚಂಡಿಕಾಯಾಗವೊಂದು ನಡೆದಿದ್ದು, ಚಂದ್ಕೂರು ಹೆಚ್ಚು ಪ್ರಸಿದ್ಧಿ ಪಡೆದಿತ್ತು ಎಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.

ಅದಕ್ಕೆ ಸುಮಾರು 4 ವರ್ಷಗಳ ಹಿಂದೆ ಅಂದರೆ 1996ರಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಪ್ರಸ್ತುತ ಸೇತುವೆಯ ಜತೆಗೆ ರಸ್ತೆಯೂ ಶಿಥಿಲಾವಸ್ಥೆಯಲ್ಲಿದೆ. ರಸ್ತೆಯುದ್ದಕ್ಕೂ ಹೊಂಡಗಳಿದ್ದು, ಹೀಗಾಗಿ ರಸ್ತೆ ದುರಸ್ತಿಯ ಬೇಡಿಕೆಯೂ ಜೋರಾಗಿ ಕೇಳಿಬರುತ್ತಿದೆ. ಮಳೆಗಾಲದಲ್ಲಿ ಸೇತುವೆಯ ತಳದಲ್ಲಿ ಅಪಾಯದ ಸ್ಥಿತಿಯಲ್ಲಿ ನೀರು ಹರಿಯುವುದರಿಂದ ಜನರು ಸೇತುವೆ ದಾಟುವುದಕ್ಕೆ ಹೆದರುತ್ತಾರೆ.

ದೇವಳದಿಂದ ಮನವಿ
ಪ್ರಸ್ತುತ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಡಿ. 31ರಂದು ಶಾಸಕರನ್ನು ಭೇಟಿಯಾಗಿ ಅನುದಾನಕ್ಕಾಗಿ ಮನವಿ ನೀಡಿದ್ದಾರೆ.

ದೇವಸ್ಥಾನಕ್ಕೆ ಬೇಕಾದ ಅನುದಾನದ ಜತೆಗೆ ಕುತ್ರೊಟ್ಟಿನಿಂದ ದೇವಸ್ಥಾನವನ್ನು ಸಂಪರ್ಕಿಸುವ 3 ಕಿ.ಮೀ.ಉದ್ದದ ರಸ್ತೆ ದುರಸ್ತಿ ಹಾಗೂ ಶಿಥಿಲಗೊಂಡಿರುವ ಕಿರಿದಾದ ಸೇತುವೆಯ ಬದಲು ಹೊಸದಾದ ಸೇತುವೆ ನಿರ್ಮಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಶಾಸಕರು ಸಂಬಂಧಪಟ್ಟ ಸಚಿವರ ಬಳಿ ಅನುದಾನಕ್ಕೆ ಪ್ರಯತ್ನಿಸುವ ಭರವಸೆ ನೀಡಿದ್ದಾರೆ ಎಂದು ಸಮಿತಿಯವರು ತಿಳಿಸಿದ್ದಾರೆ.