ಯಕ್ಷಗಾನ ಪಠ್ಯ ಮುದ್ರಣ ಮತ್ತು ಜಾರಿಗೆ ಒತ್ತಾಯ

ಯಕ್ಷಗಾನ ಪಠ್ಯ ಮುದ್ರಣ ಮತ್ತು ಜಾರಿಗೆ ಒತ್ತಾಯ

GK   ¦    Nov 07, 2018 02:48:10 PM (IST)
ಯಕ್ಷಗಾನ ಪಠ್ಯ ಮುದ್ರಣ ಮತ್ತು ಜಾರಿಗೆ ಒತ್ತಾಯ

ಸುಳ್ಯ: ಕರ್ನಾಟಕ ಪಠ್ಯಪುಸ್ತಕ ಸಂಘ ಒಂಬತ್ತು ವರ್ಷಗಳ ಹಿಂದೆ ಆರಂಭಿಸಿ ಪೂರ್ಣಗೊಳಿಸಿರುವ ಜೂನಿಯರ್ ಮತ್ತು ಸೀನಿಯರ್ ಯಕ್ಷಗಾನ ಪಠ್ಯ ಪುಸ್ತಕವನ್ನು ತಕ್ಷಣ ಮುದ್ರಣಗೊಳಿಸಿ ಕಲಿಕಾರ್ಥಿಗಳಿಗೆ ದೊರಕುವಂತೆ ಮಾಡಬೇಕೆಂದು ಸುಳ್ಯದ ಯಕ್ಷಗಾನ ಕಲಾವಿದರು ಮತ್ತು ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸುಳ್ಯದಲ್ಲಿ ಸಭೆ ನಡೆಸಿದ ಇವರು ಕಳೆದ ಒಂಬತ್ತು ವರ್ಷಗಳ ಹಿಂದೆ ಸುಳ್ಯದಿಂದಲೇ ಆರಂಭವಾಗಿ ಹಂತ ಹಂತವಾಗಿ ತಯಾರಿಯಾದ ಪಠ್ಯಪುಸ್ತಕ ಎಲ್ಲಾ ರೀತಿಯ ಕೆಲಸ ಪೂರ್ಣಗೊಳಿಸಿದ್ದರೂ ಮುದ್ರಣವಾಗದೇ ನೆನೆಗುದಿಗೆ ಬಿದ್ದಿದೆ. ಯಾವ ಕಾರಣದಿಂದಾಗಿ ಈ ಪಠ್ಯ ಮುದ್ರಣಗೊಳ್ಳದೇ ಉಳಿದಿದೆ ಎನ್ನುವ ಮಾಹಿತಿ ತಿಳಿಯಬೇಕಾಗಿದೆ ಎಂದು ಸಭೆ ಒತ್ತಾಯಿಸಿತು.

ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ಯಕ್ಷ ಶಿಕ್ಷಣದ ಸಂಚಾಲಕ ಡಾ.ಸುಂದರ ಕೇನಾಜೆ ಮಾತನಾಡಿ, ತೆಂಕು ಮತ್ತು ಬಡಗುತಿಟ್ಟು ಯಕ್ಷಗಾನದ ಪಠ್ಯಕ್ರಮಕ್ಕಾಗಿ ಹಲವು ಕಾರ್ಯಾಗಾರ ಮತ್ತು ಪಠ್ಯಪುಸ್ತಕ ತಯಾರಿಗಾಗಿ ಅನೇಕ ಕಾರ್ಯಾಗಾರ ನಡೆಸಿದ್ದಲ್ಲದೇ ಪೂರಕ ಫೋಟೋ ದಾಖಲೆ ಮತ್ತು ರೇಖಾಚಿತ್ರಗಳನ್ನು ತಯಾರಿಸಲಾಗಿದೆ. ತಜ್ಞರ ಪರಿಶೀಲನೆಯೂ ನಡೆದಿದೆ. ಎರಡು ಪಠ್ಯಗಳ ಸಂಪೂರ್ಣ ಕೆಲಸ ಪೂರ್ಣಗೊಂಡರೂ ಇನ್ನೂ ಪುಸ್ತಕ ಹೊರಬಾರದೇ ಆಸಕ್ತ ಕಲಿಕಾರ್ಥಿಗಳಿಗೆ ನಿರಾಶೆ ಆಗುವಂತಾಗಿದೆ ಎಂದು ಹೇಳಿದರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಹಿರಿಯ ಯಕ್ಷಗಾನ ಕಲಾವಿದ ವೆಂಕಟ್ರಾಮ್ ಭಟ್ ಸುಳ್ಯ, ಶಿಕ್ಷಕರ ಯಕ್ಷಗಾನ ಒಕ್ಕೂಟದ ಸಂಚಾಲಕ ಮತ್ತುಪಠ್ಯ ಪುಸ್ತಕ ಸಮಿತಿ ಸದಸ್ಯ ಪ್ರಕಾಶ್ ಮೂಡಿತ್ತಾಯ, ಶಿಕ್ಷಕರ ಯಕ್ಷಗಾನ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಬೆಳ್ಳಾರೆ, ಜೀವನ್ ರಾಂ ಸುಳ್ಯ, ಶಶಿಧರ ಎಂ.ಜೆ, ಕೇಶವ ಸಿ.ಎ, ಗಿರಿಜಾ ಎಂ.ವಿ, ಚಂದ್ರಶೇಖರ ಪೇರಾಲು, ದಿನೇಶ್‍ಕುಕ್ಕುಜಡ್ಕ, ಮಮತಾ ಎಂ.ಜೆ ಮತ್ತು ಯಕ್ಷಗಾನ ಕಲಿಕಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಮುತುವರ್ಜಿ ವಹಿಸಲಿ: ಯಕ್ಷಗಾನ ಪಠ್ಯ ಪುಸ್ತಕ ಹೊರ ತರಲು ಯಕ್ಷಪ್ರೇಮಿಗಳು ಮತ್ತು ಕರಾವಳಿ ಭಾಗದ ಜನಪ್ರತಿನಿಧಿಗಳು ಮುತುವರ್ಜಿವಹಿಸಬೇಕು, ಇಷ್ಟು ದೀರ್ಘ ಕಾಲವಾದರೂ ಅದು ಹೊರ ಬರದೇ ಇರುವುದಕ್ಕೆ ಇರುವ ಕಾರಣವನ್ನು ಸರಿಪಡಿಸಿ ತಕ್ಷಣ ಜಾರಿಗೊಳಿಸಲು ಪ್ರಯತ್ನಿಸಬೇಕೆಂದು ಸಭೆ ಒತ್ತಾಯಿಸಿತು. ರಾಜ್ಯ ಕಲೆಯ ಮಾನ್ಯತೆ ಪಡೆಯಬೇಕಾದ ಯಕ್ಷಗಾನ ಕಲೆಯೊಂದಕ್ಕೆ ಪ್ರಥಮ ಬಾರಿಗೆ ಸರ್ಕಾರಿ ಹಂತದಿಂದ ಪಠ್ಯ ತಯಾರಿಯ ಕೆಲಸ ನಡೆದಿದೆ, ಇಷ್ಟು ಸಮಯ ಅದರ ಪ್ರಕ್ರಿಯೆಗೆ ಕಾಲಾವಕಾಶ ಹಿಡಿದರೂ ಇನ್ನೂ ಅದು ನೆನೆಗುದಿಗೆ ಬೀಳುವುದು ಸರಿಯಲ್ಲ. ಇಂತಹಾ ಮಹತ್ವದ ಕೆಲಸವನ್ನು ವ್ಯರ್ಥ ಆಗಲು ಬಿಡಬಾರದು, ಆ ಮೂಲಕ ಯಕ್ಷಗಾನ ಕಲೆಗೆ ಅಪಚಾರವಾಗದಂತೆ ಎಲ್ಲಾ ಯಕ್ಷಗಾನ ಅಭಿಮಾನಿಗಳು, ವಿದ್ವಾಂಸರು, ಕಲಾವಿದರು ಮತ್ತು ಅಕಾಡೆಮಿಯಂತಹಾ ಸಂಸ್ಥೆಗಳು ನೋಡಿಕೊಳ್ಳಬೇಕಾಗಿದೆ ಎಂದು ಸಭೆ ಆಗ್ರಹಿಸಿತು.