ಸಿಎಂ ಸಿದ್ದರಾಮಯ್ಯ ಇಂದು ಸಂಜೆಯೊಳಗೆ ರಾಜೀನಾಮೆ ನೀಡಲು ಪೂಜಾರಿ ಒತ್ತಾಯ

ಸಿಎಂ ಸಿದ್ದರಾಮಯ್ಯ ಇಂದು ಸಂಜೆಯೊಳಗೆ ರಾಜೀನಾಮೆ ನೀಡಲು ಪೂಜಾರಿ ಒತ್ತಾಯ

Aug 12, 2017 02:58:14 PM (IST)
ಸಿಎಂ ಸಿದ್ದರಾಮಯ್ಯ ಇಂದು ಸಂಜೆಯೊಳಗೆ ರಾಜೀನಾಮೆ ನೀಡಲು ಪೂಜಾರಿ ಒತ್ತಾಯ

ಮಂಗಳೂರು: ಇಂದು ಸಂಜೆಯೊಳಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಹಾಗೂ ಮುಂದಿನ ಮುಖ್ಯಮಂತ್ರಿಯಾಗಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಆಗ್ರಹಿಸಿದರು.  ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಬರಪೀಡಿತ ಪ್ರದೇಶಗಳಿಗೆ ತೆರಳಲು ಸಮಯವಿಲ್ಲ. ಸಿಎಂ ಸಿದ್ದರಾಮಯ್ಯ ಹಗಲಿನಲ್ಲಿ ನಿದ್ರೀಸುತ್ತಿದ್ದಾರೆ, ರಾತ್ರಿಯಲ್ಲಿ ಇಸ್ಪೀಟ್ ಆಟವಾಡುತ್ತಿದ್ದಾರೆ. ಸರಿಯಾಗಿ ಅಧಿಕಾರವನ್ನು ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ ಎಂದರು.

‘ಡಿ.ಕೆ.ಶಿವಕುಮಾರ್ ನಿಮಗಿಂತ ಪ್ರಬಲರಾಗುತ್ತಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲು ಶಕ್ತರಾಗಿದ್ದಾರೆ. ನೀವು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ತುಂಬಾ ಕಷ್ಟವಿದೆ' ಎಂದು ಎಚ್ಚರಿಸಿದರು.ಇಂದು ಅಮಿತ್ ಶಾ ಕರ್ನಾಟಕ್ಕೆ ಬಂದಿದ್ದಾರೆ. ಅವರು ಬಂದಿರುವುದು ನಿಮ್ಮನ್ನು ಕೆಳಗಿಳಿಸೋಕೆ. ಹದಿನೆಂಟು ರಾಜ್ಯಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿ ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಬೆಂಬಲ:ನಟ ಉಪೇಂದ್ರ ಅವರು ರಾಜಕೀಯಕ್ಕೆ ಬರುವ ಕುರಿತು ಪ್ರತಿಕ್ರಿಯೆ ನೀಡಿದ ಜನಾರ್ದನ ಪೂಜಾರಿ, 'ಉಪೇಂದ್ರ ಅವರಲ್ಲಿ ವಿಭಿನ್ನ ಆಲೋಚನೆಗಳಿವೆ. ಆದರೆ, ಅವರು ಬೇರೆ ಪಕ್ಷವನ್ನು ಸೇರಬಾರದು. ಹೊಸ ಪಕ್ಷವನ್ನು ಕಟ್ಟಬೇಕು, ಉಪೇಂದ್ರ ಅವರ ಚಿಂತನೆಗೆ ನನ್ನ ಸಂಪೂರ್ಣ ಬೆಂಬಲವಿದೆ' ಎಂದು ಹೇಳಿದರು.