ಭೂಕುಸಿತದಿಂದ ಚಾರ್ಮಾಡಿ ರಸ್ತೆ ಸ್ಥಿತಿ ದುಸ್ಥರ

ಭೂಕುಸಿತದಿಂದ ಚಾರ್ಮಾಡಿ ರಸ್ತೆ ಸ್ಥಿತಿ ದುಸ್ಥರ

DA   ¦    Aug 13, 2019 08:21:42 PM (IST)
ಭೂಕುಸಿತದಿಂದ ಚಾರ್ಮಾಡಿ ರಸ್ತೆ ಸ್ಥಿತಿ ದುಸ್ಥರ

ಬೆಳ್ತಂಗಡಿ: ಚಾರ್ಮಾಡಿ ಕಣಿವೆ ರಸ್ತೆ ಶಾಶ್ವತವಾಗಿ ಮುಚ್ಚಿ ಹೋಗಲಿದೆಯೇ ಎಂಬ ಸಂದೇಹ ಅಲ್ಲಿನ ಘನಘೋರ ಸ್ಥಿತಿಯನ್ನು ನೋಡಿದಾಗ ಕಾಡತೊಡಗಿದೆ.

ಎರಡು ಜಿಲ್ಲೆಗಳನ್ನು ಸಂಪರ್ಕಿಸುವ ಚಿಕ್ಕಮಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಭಾರೀ ಭೂ ಕುಸಿತಗಳಾಗಿದ್ದು ರಸ್ತೆ ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗದ ಸ್ಥಿತಿಯನ್ನು ತಲುಪಿದೆ. ಈಗ ಘಾಟಿಯಲ್ಲಿ ನಡೆದಿರುವ ಭೂಕುಸಿತಗಳನ್ನು ನೋಡಿದರೆ ಚಾಮಾಡಿ ಘಾಟಿ ರಸ್ತೆ ಯಾವುದಾದರೂ ಪರ್ಯಾಯ ಕ್ರಮಗಳನ್ನು ಮಾಡದಿದ್ದರೆ ಶಾಶ್ವತವಾಗಿ ಮುಚ್ಚಿ ಹೋಗುವ ಭೀತಿ ಮೂಡಿದೆ.

ಕಳೆದ ಎರಡು ಮೂರು ವರ್ಷಗಳಿಂದ ಪ್ರತಿ ಬಾರಿಯೂ ಚಾರ್ಮಾಡಿ ಘಾಟಿಯಲ್ಲಿ ನಿರಂತರ ಭೂಕುಸಿತವಾಗುತ್ತಾ ಬಂದಿದ್ದು, ಈ ಬಾರಿ ದೊಡ್ಡಪರಮಾಣದ ಕುಸಿತ ಕಂಡುಬಂದಿದೆ. ವಿಶೇಷವೆಂದರೆ ಈಬಾರಿ ಘಾಟಿಯ ಮೇಲ್ಬಗದಲ್ಲಿ ಮೂಡಿಗೆರೆ ತಾಲೂಕಿಗೆ ಸೇರಿದ ಭಾಗದಲ್ಲಿ ಭೂಕುಸಿತ ಹೆಚ್ಚಾಗಿ ಸಂಭವಿಸಿದ್ದು ಕುಸಿತದ ತೀವ್ರತೆ ಅತ್ಯಂತ ಹೆಚ್ಚಿನದಾಗಿದೆ.

ಚಾರ್ಮಾಡಿ ಘಾಟ್‍ನಲ್ಲಿ 11 ಹೇರ್ ಪಿನ್ ತಿರುವುಗಳಿದ್ದು, 3ನೇ ತಿರುವಿನಿಂದ 11ತಿರುವಿನ ವರೆಗೂ ಅಲ್ಲಲ್ಲಿ ಗುಡ್ಡಕುಸಿತಗಳಾಗಿದ್ದು ಅದನ್ನು ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಸುಮಾರು ಏಳು ಕಡೆಗಳಲ್ಲಿ ಇಂತಹ ಕುಸಿತಗಳು ಕಂಡು ಬಂದಿದೆ. ಘಾಟಿಯಲ್ಲಿ ಅಣ್ಣಪ್ಪ ದೇವಸ್ಥಾನದಿಂದ ಆಕಡೆಗೆ ಮಲೆಯ ಮಾರುತದವರೆಗೂ ವಿವಿದೆಡೆಗಳಲ್ಲಿ ಭೂ ಕುಸಿತವಾಗಿರುವುದು ವರದಿಯಾಗಿದ್ದು ಇದು ಅಪಾಯಕಾರಿ ರೀತಿಯಲ್ಲಿ ಆಗರುವುದಾಗಿ ತಿಳಿದು ಬರುತ್ತಿದೆ. ಭೂ ಕುಸಿತದಿಂದಾಗಿ ಭಾರೀ ಪ್ರಮಾಣದ ಕಲ್ಲು ಮಣ್ಣುಗಳು, ಮರಗಳು ರಸ್ತೆಯಲ್ಲಿ ತುಂಬಿಕೊಂಡಿದೆ. ಅದೇ ರೀತಿ ಕೆಲವೆಡೆ ರಸ್ತೆಯ ಅರ್ಧಬಾಗವೇ ಕುಸಿದು ಹೋಗಿದ್ದು ಇಡೀ ರಸ್ತೆಯೇ ಕುಸಿತು ಹೋಗುವ ಸ್ಥಿತಿ ನಿರ್ಮಣವಾಗಿದೆ.

ರಸ್ತೆಯೇ ಕುಸಿದು ಹೋಗಿರುವಲ್ಲಿ ತಾತ್ಕಾಲಿಕ ಪರಿಹಾರವನ್ನು ಕಾಣುವುದು ಸುಲಭದಲ್ಲಿ ಸಾಧ್ಯವಿಲ್ಲವಾಗಿದ್ದು ರಸ್ತೆ ಸುರಕ್ಷತೆಗೆ ಸರಿಯಾಗಿ ಕ್ರಮ ಕೈಗೊಳ್ಳದೆ ರಸ್ತೆಯನ್ನು ಸಂಚಾರಕ್ಕೆ ತೆರವುಗೊಳಿಸುವ ಸಾಧ್ಯತೆ ತೀರಾ ಕಡಿಮೆಯಾಗಿದೆ. ಇದೇ ರೀತಿಯಲ್ಲಿ ಮಳೆ ಹಾಗೂ ಭೂಕುಸಿತಗಳು ಮುಂದುವರಿದರೆ ಚಾರ್ಮಾಡಿ ಘಾಟ್ ರಸ್ತೆ ಶಾಶ್ವತವಾಗಿ ಬಂದ್ ಆಗುವ ಸಾಧ್ಯತೆಗಳು ಇದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಪರಿಸರ ತಜ್ಞರುಗಳು, . ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಅರಣ್ಯ ಇಲಾಖಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಮಣ್ಣು, ಕಲ್ಲು ತೆರವು ಕಾರ್ಯ ನಿರಂತರ ನಡೆಯುತ್ತಿದ್ದು, 4 ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯೇ ಕುಸಿದು ಬೃಹತ್ ಕಂದಕ ನಿರ್ಮಾಣಗೊಂಡಿದೆ. ಪಶ್ಚಿಮ ಘಟದ ಗುಡ್ಡಗಾಡು ಪ್ರದೇಶಗಳಲ್ಲಿ ಚಾರ್ಮಾಡಿ ಘಾಟ್ ಅರಣ್ಯ ವ್ಯಾಪ್ತಿಯಲ್ಲಿ ಕಳೆದ 6 ದಿನಗಳಿಂದ ಬೆಟ್ಟದ ಬೆನ್ನಿನ ಭಾಗದಲ್ಲಿ ಹಲವೆಡೆ ಬಂಡೆ, ಮಣ್ಣು ಜಾರಿದ ಸ್ಥಿತಿಯಲ್ಲಿರುವುದು ಶನಿವಾರ ರಾತ್ರಿಯಿಂದ ಘಾಟ್ ಕುಸಿಯಲು ಆರಂಭಗೊಂಡಿದೆ. ಚಾರ್ಮಾಡಿ ಘಾಟ್ ಪ್ರದೇಶದ ಏರಿಕಲ್ಲು, ಕೊಡೆಕಲ್ಲು, ಮಿಂಚುಕಲ್ಲು, ಬಾರೆಕಲ್ಲು ಬೆಟ್ಟಗಳು ಬೃಹತ್ ಬಂಡೆಗಳೊಂದಿಗೆ ಕುಸಿದಿದ್ದು, ಘಾಟ್ ಪ್ರದೇಶದಲ್ಲಿ ಬೃಹತ್ ಕಂದಕಗಳು ನಿರ್ಮಾಣಗೊಂಡಿದೆ.