ರೈತರ ಸಾಲಮನ್ನಾಗಿ ಗುರುತುಪತ್ರ ಮಾತ್ರ ಸಾಕು: ಸಚಿವ ಕಾಶೆಂಪುರ

ರೈತರ ಸಾಲಮನ್ನಾಗಿ ಗುರುತುಪತ್ರ ಮಾತ್ರ ಸಾಕು: ಸಚಿವ ಕಾಶೆಂಪುರ

DA   ¦    Oct 11, 2018 02:32:47 PM (IST)
ರೈತರ ಸಾಲಮನ್ನಾಗಿ ಗುರುತುಪತ್ರ ಮಾತ್ರ ಸಾಕು: ಸಚಿವ ಕಾಶೆಂಪುರ

ಬೆಳ್ತಂಗಡಿ: ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರೈತರು ತಮ್ಮ ಗುರುತು ಪತ್ರ ಹೊರತುಪಡಿಸಿ ಯಾವುದೇ ವಿಶೇಷ ದಾಖಲೆಪತ್ರ ಸಲ್ಲಿಸಬೇಕಾಗಿಲ್ಲ ಎಂದು ರಾಜ್ಯ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸ್ಪಷ್ಟಪಡಿಸಿದ್ದಾರೆ.

ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‍ಡಿ)ಗೆ ಗುರುವಾರ ಭೇಟಿ ನೀಡಿದ ಸಂದರ್ಭ ಅವರು ರೈತರ ಅಹವಾಲು ಸ್ವೀಕರಿಸಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಸಾಲಮನ್ನಾಕ್ಕಾಗಿ ರೈತರು ಬ್ಯಾಂಕಿಗೆ ಒಂದು ಅರ್ಜಿ ಮಾತ್ರ ಸಲ್ಲಿಸಿದರೆ ಸಾಕು. ಅದೂ ಕೂಡ ಅವರು ಬ್ಯಾಂಕಿಗೆ ಬಂದರೆ ಬ್ಯಾಂಕಿನ ಕಾರ್ಯದರ್ಶಿಗಳೇ ಆ ಕೆಲಸ ಮಾಡಿಕೊಡಲಿದ್ದಾರೆ. ಹಾಗಾಗಿ ರೈತರು ನಿರಾಳವಾಗಿರಬಹುದು. ಸಹಕಾರಿ ಸಂಘಗಳ ಸಾಲ ಮನ್ನಾದ ಜೊತೆಗೆ ಪಿಎಲ್‍ಡಿ ಬ್ಯಾಂಕ್‍ಗಳ ಸಾಲ ಕೂಡ ಮನ್ನಾ ಆಗಲಿದೆ ಎಂದು ಭಾವಿಸಿ ಸದಸ್ಯರಿಂದ ಸಾಲ ವಸೂಲಾತಿ ಆಗುತ್ತಿಲ್ಲ. ಹಿಂದಿನ ಸರಕಾರ ಮನವಿಯ ಮೇರೆಗೆ ಪಿಎಲ್‍ಡಿ ಬ್ಯಾಂಕ್‍ಗಳ ಬಡ್ಡಿ ಮನ್ನಾ ಮಾಡಿತ್ತು. ಈ ಬಾರಿ ಕೂಡ ಅಧ್ಯಕ್ಷರಲ್ಲಿ ಈಗಾಗಲೇ ತಿಳಿಸಿದ್ದೇನೆ. ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಬಡ್ಡಿ ಮನ್ನಾಕ್ಕೆ ಆಗ್ರಹಿಸಲಾಗುವುದು ಎಂದರು.

ನೆರೆ ಪರಿಹಾರ ನಿಧಿಗೆ ತಲಾ 25 ಸಾವಿರ ದೇಣಿಗೆ
ಪಿಎಲ್‍ಡಿ ಬ್ಯಾಂಕ್ ಬೆಳ್ತಂಗಡಿ ಮತ್ತು ಹತ್ಯಡ್ಯ ಸಹಕಾರಿ ಸಂಘದಿಂದ ಮುಖ್ಯಮಂತ್ರಿ ನೆರೆ ಪರಿಹಾರ ನಿಧಿಗೆ ತಲಾ 25 ಸಾವಿರ ರೂ. ದೇಣಿಗೆಯನ್ನು ಸಚಿವರ ಮೂಲಕ ಬ್ಯಾಂಕಿನ ಅಧ್ಯಕ್ಷ ಪ್ರವೀಣ್‍ಚಂದ್ರ ಗೌಡ ಮತ್ತು ಅಡ್ಕಾಡಿ ಜಗನ್ನಾಥ ಗೌಡ ಅವರು ಸಚಿವರಿಗೆ ಹಸ್ತಾಂತರಿಸಿದರು. ಬೆಳಗ್ಗಿನ ಉಪಹಾರವನ್ನು ಪಿಎಲ್‍ಡಿ ಬ್ಯಾಂಕಿನಲ್ಲೇ ಪೂರೈಸಿದ ಸಚಿವರಿಗೆ ಬಳಿಕ ಬ್ಯಾಂಕಿನ ವತಿಯಿಂದ ಸ್ಮರಣಿಗೆ ನೀಡಿ ಪುರಸ್ಕರಿಸಲಾಯಿತು.

ಈ ಸಂದರ್ಭ ಸಹಕಾರಿ ಸಂಘಗಳ ಜಿಲ್ಲಾ ಉಪನಿಬಂಧಕ ಬಿ.ಕೆ ಸಲೀಂ, ಪಿಎಲ್‍ಡಿ ಬ್ಯಾಂಕಿನ ಉಪಾಧ್ಯಕ್ಷ ಬಿ.ಎಸ್ ಮುಕುಂದ ಸುವರ್ಣ, ನಿರ್ದೇಶಕರಾದ ಎಂ ಈಶ್ವರ ಭಟ್ ಮಾಯಿಲ್ತೋಡಿ, ಪೆಲಪ್ಪಾರು ವೆಂಕಟ್ರಮಣ ಭಟ್, ವಿಜಯ ಕುಮಾರ್ ಕಳೆಂಜ, ಶುಭಕರ ಪೂಜಾರಿ, ಸುನೀತಾ, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವೆಂಕಪ್ಪಯ್ಯ, ಮುಂಡಾಜೆ ಸಹಕಾರಿ ಸಂಘದ ಅಧ್ಯಕ್ಷ ಎನ್.ಎಸ್ ಗೋಖಲೆ, ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ ಉಪಸ್ಥಿತರಿದ್ದರು.

More Images