ಜನಾರ್ದನ ಪೂಜಾರಿ ವಿರುದ್ಧ ಅಪಪ್ರಚಾರ: ಕಾನೂನು ಕ್ರಮ ಕೈಗೊಳ್ಳಲು ಮನವಿ

ಜನಾರ್ದನ ಪೂಜಾರಿ ವಿರುದ್ಧ ಅಪಪ್ರಚಾರ: ಕಾನೂನು ಕ್ರಮ ಕೈಗೊಳ್ಳಲು ಮನವಿ

HSA   ¦    Dec 06, 2018 08:21:08 PM (IST)
ಜನಾರ್ದನ ಪೂಜಾರಿ ವಿರುದ್ಧ ಅಪಪ್ರಚಾರ: ಕಾನೂನು ಕ್ರಮ ಕೈಗೊಳ್ಳಲು ಮನವಿ

ಮಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡಬೇಕೆಂದು ಹೇಳಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮಾಜಿ ಶಾಸಕ ಜೆ.ಆರ್. ಲೋಬೊ ನೇತೃತ್ವದಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಲೋಬೋ, ವಿಜಯಕುಮಾರ್ ಶೆಟ್ಟಿ ಅವರನ್ನು ಒಳಗೊಂಡ ನಿಯೋಗವು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಮಾಡಿದರು.

ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ ನ ಹಿರಿಯ ನೇತಾರ, ಮಂಗಳೂರು ದಸರಾದ ರೂವಾರಿ, ಕೇಂದ್ರ ಸಚಿವರಾಗಿದ್ದಾಗ ಸಾಲಮೇಳ ಮಾಡಿ ಬಡವರಿಗೆ ಆಸರೆಯಾಗಿದ್ದವರು. ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರು. ಇಂತವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ.

ಜನಾರ್ದನ ಪೂಜಾರಿ ಅವರು ದೇಶದ್ರೋಹಿಯಾಗಿದ್ದು, ಅವರನ್ನು ಎನ್ ಕೌಂಟರ್ ಮಾಡಿ ಕೊಲ್ಲಬೇಕು ಎಂದು ವ್ಯಕ್ತಿಯೊಬ್ಬ ಆಡಿಯೋದಲ್ಲಿ ಹೇಳಿದ್ದ. ಸುಮಾರು 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೂಜಾರಿ ಅವರು ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ತೀವ್ರ ಶೋಚನೀಯವಾಗಿದೆ ಎಂದು ಅಪಪ್ರಚಾರ ಮಾಡಿದ್ದರು. ಇದರ ಹಿಂದೆ ವ್ಯವಸ್ಥಿತ ಜಾಲವೇ ಇದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಈ ರೀತಿ ಅಪಪ್ರಚಾರ ಮಾಡುವವರ ಉದ್ದೇಶ ಏನು ಮತ್ತು ಅವರ ಹಿಂದಿರುವವರು ಯಾರು ಎನ್ನುವುದನ್ನು ತಿಳಿದುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.