ಉದ್ಭವಲಿಂಗವೆಂದು ಸಾರ್ವಜನಿಕರಿಗೆ ವಂಚನೆ!

ಉದ್ಭವಲಿಂಗವೆಂದು ಸಾರ್ವಜನಿಕರಿಗೆ ವಂಚನೆ!

DA   ¦    Dec 06, 2017 08:08:19 PM (IST)
ಉದ್ಭವಲಿಂಗವೆಂದು ಸಾರ್ವಜನಿಕರಿಗೆ ವಂಚನೆ!

ಬೆಳ್ತಂಗಡಿ: ಕೃತಕ ಲಿಂಗವನ್ನು ಮಣ್ಣಿನೊಳಗೆ ಹೂತಿಟ್ಟು ಇದು ಉದ್ಭವ ಲಿಂಗವೆಂದು ಪ್ರಚಾರ ಮಾಡುತ್ತಿರುವ ವಿದ್ಯಮಾನ ಆರಂಬೋಡಿ ಎಂಬಲ್ಲಿ ನಡೆಯುತ್ತಿದ್ದು, ಈ ಬಗ್ಗೆ ತನಿಖೆಗಾಗಿ ನಾಗರಿಕರು ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಮಾಡಿದ್ದಾರೆ.

ಹಳ್ಳಿಯೊಂದರಲ್ಲಿ ಹೆಚ್ಚುವರಿ ಹಣ ಸಂಪಾದನೆ ಮಾಡುವ ಉದ್ದೇಶವನ್ನಿಟ್ಟುಕೊಂಡು ದರುಶನ ಪಾತ್ರಿಯೊಬ್ಬ ಕಲ್ಲಿನ ಕೃತಕ ಶಿವಲಿಂಗವೊಂದನ್ನು ತನ್ನ ದೇವರ ಕೋಣೆಯೊಳಗೆ ಹೂತಿಟ್ಟು ಬಳಿಕ ಇದು ಅದ್ಭುತ ಪವಾಡ ಉದ್ಭವ ಲಿಂಗವೆಂದು ಪ್ರಚಾರ ಮಾಡಿ ಜನರನ್ನು ಆಕರ್ಷಿಸಿ ದಿನದಲ್ಲಿ ಸಾವಿರಾರು ರೂಗಳನ್ನು ಸಂಪಾದಿಸಿ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ ಎಂದು ನಾಗರಿಕರು ದೂರುತ್ತಿದ್ದಾರೆ.

ತಾಲೂಕಿನ ಆರಂಬೋಡಿ ಪಂ. ವ್ಯಾಪ್ತಿಯ ಐತೇರಿ ಎಂಬ ಹಳ್ಳಿಯಲ್ಲಿ ಈ ವಿದ್ಯಮಾನ ನಡೆಯುತ್ತಿದ್ದು, ಇದರ ರೂವಾರಿ ದೀಪಕ್ ಸಾಲಿಯಾನ್ ಎಂದು ಹೇಳುತ್ತಿದ್ದಾರೆ. ಇವರು ಈ ಸ್ಥಳದಲ್ಲಿ ಪ್ರತೀ ಸಂಕ್ರಮಣದಂದು ಶರೀರಕ್ಕೆ ದೈವ ತಂದುಕೊಂಡು ಸಾರ್ವಜನಿಕರಿಗೆ ಪ್ರಶ್ನಾಚಿಂತನ ಸಾಂತ್ವನ ನೀಡುತ್ತಾ ಬರುತ್ತಿದ್ದಾರೆ. ಇವರ ಮೂಲ ಉದ್ಯೋಗ ಇಸ್ತ್ರೀ ಅಂಗಡಿಯಾಗಿದೆ. ಆರ್ಥಿಕ ಸಮಸ್ಯೆಯನ್ನು ಹೊಂದಿರುವ ಇವರು ಈ ರೀತಿಯ ಉಪ ಉದ್ಯೋಗಕ್ಕೆ ಇಳಿದಿದ್ದಾರೆ ಎಂದು ನೆರೆಕೆರೆಯವರು ಹೇಳುತ್ತಿದ್ದಾರೆ.

ಇವರು ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು ಮೌಢ್ಯ ಬಿತ್ತರಿಸುತ್ತಿದ್ದಾರೆ. ಜೊತೆಗೆ ಬದಿನಡೆ ಕ್ಷೇತ್ರದ ಹೆಸರನ್ನು ಬಳಸಿದ್ದಕ್ಕೆ ಹಲವಾರು ಮಂದಿಯಿಂದ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಮಾಧ್ಯಮದ ಪ್ರಶ್ನೆಗಳಿಗೆ ಗೊಂದಲದ ಉತ್ತರವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯನ್ನು ನಡೆಸಬೇಕೆಂದು ಅಲ್ಲಿನ ನಾಗರಿಕರು ಮನವಿ ಮಾಡಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.