ಚುನಾವಣೆ ಬಳಿಕ ಬೆಳ್ತಂಗಡಿಯಲ್ಲಿ ಮೊದಲ ಪ್ರತಿಭಟನೆ!

ಚುನಾವಣೆ ಬಳಿಕ ಬೆಳ್ತಂಗಡಿಯಲ್ಲಿ ಮೊದಲ ಪ್ರತಿಭಟನೆ!

DA   ¦    May 16, 2018 05:40:58 PM (IST)
ಚುನಾವಣೆ ಬಳಿಕ ಬೆಳ್ತಂಗಡಿಯಲ್ಲಿ ಮೊದಲ ಪ್ರತಿಭಟನೆ!

ಬೆಳ್ತಂಗಡಿ: ಚುನಾವಣಾ ಫಲಿತಾಂಶ ಬಂದ ಬಳಿಕ ಮೊತ್ತ ಮೊದಲ ಪ್ರತಿಭಟನೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಎಂಬಲ್ಲಿ ಬುಧವಾರ ನಡೆಯಿತು.

ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿಂದ ಶಿರ್ಲಾಲು ತನಕದ ಸುಮಾರು 3.8 ಕಿ.ಮೀ.ರಸ್ತೆ ಹದೆಗೆಟ್ಟಿದ್ದು ಶಿರ್ಲಾಲು ಎಂಬಲ್ಲಿ ಸುಮಾರು 100 ಮೀ.ನಷ್ಟು ರಸ್ತೆಯ ಡಾಮರೀಕರಣ ಚುನಾವಣಾ ಪೂರ್ವದಲ್ಲಿ ನಡೆದಿತ್ತು. ಆದರೆ ಅದು ಕಳೆದ ಕೆಲ ದಿನಗಳಿಂದ ಎದ್ದು ಹೋಗುತ್ತಿರುವುದು ಸ್ಥಳೀಯ ನಾಗರಿಕರ ಆಕ್ರೋಶಕ್ಕೆ ಕಾರಣವಾಯಿತು. ಹೀಗಾಗಿ ಬುಧವಾರ ನಾಗರಿಕರೆಲ್ಲರೂ ಸೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮೂಲಕ ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಆಕ್ರೋಶ ತೋರಿಸಿದರು. ಇದರಿಂದ ಬೆಳಗಿನಿಂದ ಮಧ್ಯಾಹ್ನದ ತನಕ ವಾಹನ ಸಂಚಾರವಿಲ್ಲದೆ ಜನರು ಪರದಾಡುವಂತಾಯಿತು.

ರಸ್ತೆ ಅಗಲೀಕರಣದ ಕಾಮಗಾರಿ ಕಳೆದ ಅಕ್ಟೋಬರ್ ನಿಂದ ನಡೆಯುತ್ತಾ ಇತ್ತು. ಬಳಿಕ ಚುನಾವಣೆಯ ನೆಪದಲ್ಲಿ ಒಂದೂವರೆ ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಅಸಮರ್ಪಕ ಕಾಮಗಾರಿಯಿಂದಾಗಿ ಒಂದು ದಿನ ಬಸ್ ಉರುಳಿತ್ತು. ಇಲ್ಲಿನ ಕಳಪೆ ಕಾಮಗಾರಿಯ ವಿರುದ್ದ ಸಂಬಂಧಪಟ್ಟ ಇಂಜಿನಿಯರಿಂಗ್ ದೂರವಾಣಿ ಮೂಲಕ ದೂರು ನೀಡಲಾಗಿತ್ತು. ಗುತ್ತಿಗೆದಾರರು ದೂರವಾಣಿಯೇ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ನಾಗರಿಕರೆಲ್ಲ ಸೇರಿ ಪ್ರತಿಭಟನೆಯನ್ನು ಮಾಡುವುದೆಂದು ನಿರ್ಧರಿಸಿ ವಾಹನಗಳನ್ನು ಬೆಳಿಗ್ಗೆ 8.30 ರಿಂದ ಸಂಚರಿಸದಂತೆ ತಡೆಯೊಡ್ಡಿದರು. ಅಲ್ಲದೆ ಕಳೆಪ ಡಾಮರೀಕರಣ ಮಾಡಿರುವುದನ್ನು ಮಾಧ್ಯಮದರಿಗೆ ತೋರಿಸಿದರು. ಡಾಂಬರು ಕೈಯಲ್ಲಿ ತೆಗೆಯುವಂತಹ ಸ್ಥಿತಿಯಲ್ಲಿರುವುದನ್ನು ನಾಗರಿಕರು ಪ್ರತ್ಯಕ್ಷ ತೋರಿಸಿಕೊಟ್ಟರು. ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಂಗಳವಾರ ಇಂಜಿನಿಯರ್ ಗೆ, ಪೋಲಿಸ್ ಇಲಾಖೆಗೆ, ಕಂದಾಯ ಇಲಾಖೆಗೆ ತಿಳಿಸಲಾಗಿತ್ತು. ಆದರೆ ಮಧ್ಯಾಹ್ನವಾದರೂ ಬರಬೇಕಾದವರು ಬರಲಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಅನತಿ ದೂರದಲ್ಲಿರುವ ಮೋರಿ ಕಾಮಗಾರಿ ಕಳಪೆಯಾಗಿರುವುದನ್ನು ಉಲ್ಲೇಖಿಸಿದರು.

ಇಲ್ಲಿನ 3.8 ಕಿ.ಮೀ.ಉದ್ದದ ರಸ್ತೆಗೆ ರೂ. 2.85 ಕೋಟಿ ಅನುದಾನ ಮಂಜೂರಾಗಿದ್ದು ಗುಣಮಟ್ಟ ಹಾಳಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಇದನ್ನು ಪರೀಕ್ಷಿಸಿ ಮೇಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ಇದಕ್ಕೆ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಚುನಾವಣೆಯ ಸಂದರ್ಭ ಇದ್ದುದರಿಂದ ಸರಿಯಾಗಿ ನೋಡಲಾಗಲಿಲ್ಲ ಎಂದು ಇಂಜಿನಿಯರಿಂಗ್ ವಿಭಾಗದವರೊಬ್ಬರು ವಿವರಿಸಿದರಾದರೂ ಅದನ್ನು ಲಿಖಿತವಾಗಿ ಕೊಡುವಂತೆ ಆಗ್ರಹ ಪಡಿಸಿದರು.

ಕೂಡಲೇ ಮರು ಡಾಮರೀಕರಣ ಮಾಡಬೇಕು ಇಲ್ಲವಾದಲ್ಲಿ ರಾಜ್ಯ ಹೆದ್ದಾರಿ ತಡೆ ಮಾಡುವೆವು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಚುನಾವಣಾ ನಿಮಿತ್ತ 144 ಸೆಕ್ಷನ್ ಇರುವುದನ್ನು ಪ್ರತಿಭಟನಾಕಾರರ ಗಮನಕ್ಕೆ ವೇಣೂರು ಪೊಲೀಸರು ತಂದರು. ಇದನ್ನು ಗಮನಕ್ಕೆ ತಂದು ಕೊಳ್ಳದ ಪ್ರತಿಭಟನೆಯನ್ನು ಮುಂದುವರಿಸಿದರು. ಕೆಲ ಹೊತ್ತಿನ ಬಳಿಕ ಸ್ಥಳಕ್ಕೆ ವೇಣೂರು ಠಾಣಾಧಿಕಾರಿ ಹೆಚ್ಚಿನ ಸಿಬ್ಬಂದಿಯೊಂದಿಗೆ ಬಂದು ಪ್ರತಿಭಟನೆ ನಿಲ್ಲಿಸದಿದ್ದರೆ ಲಾಠಿ ಚಾರ್ಜ್ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು. ಇದೇ ವೇಳೆ ಅಲ್ಲಿಗೆ ಬಂದ ಅಳದಂಗಡಿ ಗ್ರಾ.ಪಂ.ಸದಸ್ಯ ಸದಾನಂದ ಪೂಜಾರಿ ಉಂಗಿಲ ಬೈಲು ಅವರು ಪ್ರತಿಭಟನಾಕಾರರನ್ನು ಸಮಾಧಾನಿಸಿ ಇಂಜಿನಿಯರ್ ಶಿವಪ್ರಸಾದ ಅಜಿಲ ಅವರು ಸಂಜೆ ವೇಳೆ ಬಂದು ಮಾತನಾಡಲಿದ್ದಾರೆಂದು ಭರವಸೆ ನೀಡಿದರು. ಸಂಜೆ ಬಂದ ಶಿವಪ್ರಸಾದ ಅವರು ಮೇ 20 ರಂದು ಕಾಮಗಾರಿಯ ಬಗ್ಗೆ ಕೂಲಂಕುಷವಾಗಿ ವಿಮರ್ಶಿಸಿ ಮುಂದಿನ ಕ್ರಮ ಕೈಗೋಳ್ಳುವುದೆಂದು ಭರವಸೆ ನೀಡುವುದರೊಂದಿಗೆ ರಸ್ತೆ ತಡೆ ಹಿಂದಕ್ಕೆ ಪಡೆಯಲಾಯಿತು.

More Images