ಕತ್ತಲಲ್ಲಿ ಬದುಕುತ್ತಿರುವ ದಲಿತ ಮಹಿಳೆಗೆ ವಿದ್ಯುತ್ ಸಂಪರ್ಕ ಒದಗಿಸಲು ಬಂಟ್ವಾಳ ಎಸ್ ಐ ಪತ್ರ

ಕತ್ತಲಲ್ಲಿ ಬದುಕುತ್ತಿರುವ ದಲಿತ ಮಹಿಳೆಗೆ ವಿದ್ಯುತ್ ಸಂಪರ್ಕ ಒದಗಿಸಲು ಬಂಟ್ವಾಳ ಎಸ್ ಐ ಪತ್ರ

MV   ¦    Sep 14, 2018 03:19:29 PM (IST)
ಕತ್ತಲಲ್ಲಿ ಬದುಕುತ್ತಿರುವ ದಲಿತ ಮಹಿಳೆಗೆ ವಿದ್ಯುತ್ ಸಂಪರ್ಕ ಒದಗಿಸಲು ಬಂಟ್ವಾಳ ಎಸ್ ಐ ಪತ್ರ

ಬಂಟ್ವಾಳ: ಪರಿಶಿಷ್ಟ ಜಾತಿಯ ಅನಾಥೆ ವೃದ್ಧ ಮಹಿಳೆಯ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಿ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮೆಸ್ಕಾಂ ಇಲಾಖೆಗೆ ಪತ್ರ ಬರೆದು ತೋರಿದ ಮಾನವೀಯತೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪು ಗುಡ್ಡೆ ನಿವಾಸಿ ದಿ.ಕುಕ್ಕ ಮುಗೇರ ಅವರ ಪತ್ನಿ 67 ವರ್ಷದ ಪೊಡಿ ಮುಗೇರ ಅವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ ಚಿಮಿಣಿ ದೀಪವೇ ಬೆಳಕಾಗಿದೆ. ಇವರ ಕರುಣಾಜನಕ ಪರಿಸ್ಥಿತಿಯ ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ ಅವರು ಬಡಮಹಿಳೆಗೆ ವಿದ್ಯುತ್ ಸಂಪರ್ಕ ಕೊಡುವಂತೆ ವಿನಂತಿಸಿ ಬಂಟ್ವಾಳ ಮೆಸ್ಕಾಂ ಇಲಾಖೆಗೆ ಪತ್ರ ಬರೆದಿದ್ದಾರೆ.

ಈ ಬಡ ಮಹಿಳೆಗೆ ಹೇಳಿಕೊಳ್ಳುವವರು ಅಂತ ಯಾರು ಇಲ್ಲ. ಗಂಡ ಕುಕ್ಕ ಮುಗೇರ ಕೂಲಿ ಕೆಲಸ ಮಾಡಿ ಇವರಿಬ್ಬರ ಜೀವನ ಸಾಗುತ್ತಿತ್ತು. ಕಳೆದ ಹತ್ತು ವರ್ಷಗಳ ಹಿಂದೆ ಅನಾರೋಗ್ಯದಿಂದ ಗಂಡ ತೀರಿಹೋಗಿದ್ದಾರೆ. ಸಣ್ಣ ಮಣ್ಣಿನ ಗೋಡೆಯ ಗುಡಿಸಲು ಕಳೆದ ನಾಲ್ಕು ವರ್ಷಗಳ ಹಿಂದೆ ಮಳೆಗೆ ಬಿದ್ದು ಹೋದ ಬಳಿಕ ಯಾರ ಕೈ ಯಾರ ಬಾಯಿ ಎಂದು ಅಳೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ಸ್ಥಳೀಯ ಅಮ್ಟಾಡಿ ಗ್ರಾ.ಪಂ.ನ ನೆರವಿನಿಂದ ಸರಕಾರದ ಯೋಜನೆಯಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಮನೆಯ ಒಳಗೆ ಇನ್ನೂ ಕೂಡಾ ಸಿಮೆಂಟ್ ಹಾಕಿಲ್ಲ. ಹೊರಗಡೆ ಮಾತ್ರ ಸಿಮೆಂಟ್ ಹಾಕಲಾಗಿದ್ದು, ಮಣ್ಣಿನ ನೆಲದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಮನೆಯ ಅಂಗಳದಲ್ಲೆ ವಿದ್ಯುತ್ ಕಂಬವಿದ್ದರೂ, ಮನೆಗೆ ಈವರೆಗೆ ವಿದ್ಯುತ್ ಸಂಪರ್ಕ ಮಾತ್ರ ನೀಡದೆ ಬದುಕು ಕತ್ತಲೆ ಕೊಣೆಯಲ್ಲಿದೆ.

ಹೊಗೆಮುಕ್ತ ಬಂಟ್ವಾಳ ಆಗಬೇಕು ಎಂಬ ಸ್ಲೋಗನ್ ಕೇಳಿದ್ದೇವೆ. ಆದರೆ ಈ ಮನೆಯಲ್ಲಿ ಹೊಗೆ ಹೊಗದಿದ್ದರೆ ಊಟಕ್ಕೆ ಗತಿಯಿಲ್ಲ ಎಂಬ ಸ್ಥಿತಿ. ಸರಕಾರದ ಉಚಿತ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಕೂಡ ಇವರಿಗೆ ಸಿಕ್ಕಿಲ್ಲ. ಹೇಳುವುದಕ್ಕೆ ಇದೊಂದು ಮನೆ ಅಷ್ಟೇ. ಉಳಿದಂತೆ ಯಾವುದೇ ಮೂಲಸೌಕರ್ಯ ನೀಡದೆ ಬಡಮಹಿಳೆಯ ಬದುಕು ದುಸ್ತರವಾಗಿದೆ. ಗುಡ್ಡದ ಮೇಲಿರುವ ಮನೆಗೆ ಹೋಗುವುದಕ್ಕೆ ಸರಿಯಾದ ದಾರಿನೂ ಇಲ್ಲ. ಓಣಿಯಲ್ಲಿ ಎದ್ದು ಬಿದ್ದು ಹೋಗಬೇಕು.

ಈ ಗ್ರಾಮದ ಬೀಟ್ ಪೊಲೀಸರಾದ ಮೋಹನ್ ಮತ್ತು ಮಲಿಕ್ ಅವರು ಬೀಟ್ ಕೆಲಸದ ರೌಂಡ್ಸ್ ನಲ್ಲಿರುವ ಸಂದರ್ಭದಲ್ಲಿ ಒಂಟಿ ವೃದ್ದೆಯ ಇರುವಿಕೆ ಬಗ್ಗೆ ಗೊತ್ತಾಗುತ್ತದೆ. ಈ ವಿಚಾರವನ್ನು ನಗರ ಠಾಣೆಯ ಎಸ್.ಐ.ಚಂದ್ರಶೇಖರ ಅವರ ಗಮನಕ್ಕೆ ತಂದಾಗ ಅವರು ಇಲಾಖೆಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಸರಕಾರ ಅನೇಕ ಯೋಜನೆಗಳು ಜಾರಿಯಾದರೂ ನಿಜವಾದ ಫಲಾನುಭವಿಗಳಿಗೆ ಅದು ಮರೀಚಿಕೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಇವರ ಸಮಸ್ಯೆಯ ಬಗ್ಗೆ ಸ್ಥಳೀಯ ನಿವಾಸಿ ಕಮಲಾಕ್ಷ ಎನ್ನುವವರು ಇತ್ತೀಚಿಗೆ ನಡೆದ ಎಸ್.ಸಿ.ಎಸ್.ಟಿ.ಸಭೆಯಲ್ಲಿ ಪ್ರಸ್ತಾಪ ಮಾಡಿದಲ್ಲದೆ ಅಧಿಕಾರಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಅನಾಥೆ ವೃದ್ದ ಮಹಿಳೆಯ ಬದುಕು ಬೆಳಕಾಗಲು ಅಧಿಕಾರಿಗಳು ಜನಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

More Images