ಬಂಟ್ವಾಳ ತಾಲ್ಲೂಕಿಗೆ 30ಕೋಟಿ ಮಂಜೂರಿಗೆ ಶಾಸಕ ರಾಜೇಶ್ ಮನವಿ

ಬಂಟ್ವಾಳ ತಾಲ್ಲೂಕಿಗೆ 30ಕೋಟಿ ಮಂಜೂರಿಗೆ ಶಾಸಕ ರಾಜೇಶ್ ಮನವಿ

MV   ¦    Aug 13, 2019 10:28:50 AM (IST)
ಬಂಟ್ವಾಳ ತಾಲ್ಲೂಕಿಗೆ 30ಕೋಟಿ ಮಂಜೂರಿಗೆ ಶಾಸಕ ರಾಜೇಶ್ ಮನವಿ

ಬಂಟ್ವಾಳ: ನೆರೆ ಮತ್ತು ಮಳೆಹಾನಿಯಿಂದ ಬಂಟ್ವಾಳ ತಾಲೂಕಿನಲ್ಲಿ ೩೦ ಕೋ.ರೂ.ಗಳಷ್ಟು ನಷ್ಟ ಉಂಟಾಗಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಪರಿಹಾರ ಧನ ಮಂಜೂರುಗೊಳಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಲಾಯಿತು.

ದ.ಕ.ಜಿಲ್ಲಾ ಪ್ರವಾಸದ ವೇಳೆ ರಾಜ್ಯದ ಮುಖ್ಯಮಂತ್ರಿಗಳು ಬೆಳ್ತಂಗಡಿ ತಾಲೂಕಿನಿಂದ ಮಂಗಳೂರಿಗೆ ವಾಪಾಸಾಗುವ ವೇಳೆ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಸಿಎಂ ಅವರನ್ನು ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ಬಳಿಕ ಶಾಸಕರ ನೇತೃತ್ವದಲ್ಲಿ ನೆರೆ ಮತ್ತು ಪ್ರಾಕೃತಿಕ ವಿಕೋಪದಿಂದ ಉಂಟಾದ ತಾಲೂಕಿನಲ್ಲಿ ಉಂಟಾದ ನಷ್ಟದ ಕುರಿತು ವಿವರವಾದ ಮನವಿ ಸಲ್ಲಿಸಿ,ಅನುದಾನ ಒದಗಿಸುವಂತೆ ಒತ್ತಾಯಿಸಲಾಯಿತು.

ಬಳಿಕ ಮಾತನಾಡಿದ ಸಿಎಂ ಅವರು, ಮಳೆಹಾನಿಯಿಂದ ಮನೆ ಸಂಪೂರ್ಣ ಹಾನಿಯಾಗಿದ್ದರೆ ೫ ಲಕ್ಷ ರೂ, ಜತೆಗೆ ಸಂತ್ರಸ್ಥರು ಮನೆ ನಿರ್ಮಿಸುವವರೆಗೆ ಬಾಡಿಗೆ ಮನೆಯಲ್ಲಿದ್ದರೆ ೫ ಸಾವಿರ ರೂ.ಬಾಡಿಗೆ, ಸಂತ್ರಸ್ಥರಿಗೆ ತಕ್ಷಣಕ್ಕೆ ೧೦ ಸಾವಿರ ರೂ. ನೀಡಲಾಗುತ್ತದೆ ಎಂದು ತಿಳಿಸಿದರು.

ಬೇಡಿಕೆ ಈಡೇರುವ ಭರವಸೆಯಿದೆ : ಸಿಎಂ ಅವರಿಗೆ ಸಲ್ಲಿಸಲಾದ ಮನವಿಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಬಂಟ್ವಾಳದ ಹಾನಿಯ ಕುರಿತಂತೆ ಸಂಪೂರ್ಣ ದಾಖಲೆಗಳನ್ನೊಳಗೊಂಡು ೩೦ ಕೋ.ರೂ.ಪರಿಹಾರ ಮೊತ್ತದ ಬೇಡಿಕೆ ಸಲ್ಲಿಸಲಾಗಿದ್ದು, ತಾಲೂಕಿನಲ್ಲಿ ನೆರೆಯಿಂದ ಹಾನಿಯಾದ ಸಣ್ಣಪುಟ್ಟ ಅಂಗಡಿಯವರಿಗೂ ಪರಿಹಾರ ನೀಡಲು ಮನವಿಯಲ್ಲಿ ತಿಳಿಸಲಾಗಿದೆ ಎಂದರು. ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಯವರು ಈಡೇರಿಸುವ ವಿಶ್ವಾಸವಿದ್ದು,ವಿವಿಧ ಇಲಾಖೆಗೊಳಪಟ್ಟಂತೆ ಆಗಿರುವ ನಷ್ಟದ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು,ಹೆಚ್ಚಿನ ಅನುದಾನ ಸಿಗುವ ಭರವಸೆ ಇದೆ ಎಂದರು.

ಅಭಿನಂದನೆ: ಬಂಟ್ವಾಳ ಕ್ಷೇತ್ರದಾದ್ಯಂತ ಪ್ರವಾಹದ ಸಂದರ್ಭದಲ್ಲಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಹಗಲು,ರಾತ್ರಿ ಪರಿಹಾರ ಕಾರ್ಯದಲ್ಲಿ ಮಗ್ನರಾದ ತಹಶೀಲ್ದಾರ್ ರಶ್ಮಿ ಎಸ್.ಆರ್., ಕಂದಾಯ,ಪುರಸಭೆ,ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಅಭಿನಂದನೆ ಸಲ್ಲಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ,ಕಮಾಲಾಕ್ಷಿ ಪೂಜಾರಿ,ತಾಪಂ ಸದಸ್ಯರಾದ ಪ್ರಭಾಕರ ಪ್ರಭು,ಯಶವಂತ ಪೂಜಾರಿ, ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು, ಬಿಜೆಪಿ ಮುಖಂಡರಾದ ಉದಯಕುಮಾರ್ ರಾವ್ ಬಂಟ್ವಾಳ, ದಿನೇಶ್ ಅಮ್ಟೂರು,ರಾಮದಾಸ್ ಬಂಟ್ವಾಳ,ಮೋನಪ್ಪ ದೇವಸ್ಯ, ದೇವಪ್ಪ ಪೂಜಾರಿ, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್,ಆಶೋಕ್ ಶೆಟ್ಟಿ ಸರಪಾಡಿ, ಪುರುಷೋತ್ತಮ ಶೆಟ್ಟಿ ವಾಮದಪದವು,ಸೀತರಾಮ ಪೂಜಾರಿ,ಸುದರ್ಶನ್ ಬಜ, ಆನಂದ ಎ.ಶಂಭೂರು,ಹರೀಶ್ ಆಚಾರ್ಯರಾಯಿ,ರಮಾನಾಥ ರಾಯಿ, ಗಣೇಶ್ ರೈ ಮಾಣಿ, ಮೊದಲಾದವರು ಉಪಸ್ಥಿತರಿದ್ದರು. ದ.ಕ.ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್,ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.,ಮುಖ್ಯಾಧಿಕಾರಿ
ರೇಖಾಶೆಟ್ಟಿ, ತಾಪಂಇಓ ರಾಜಣ್ಣ,ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು,ಎಎಸ್ಪಿ ಸೈದುಲಾ ಅದಾವತ್ ಸಹಿತ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.