ದೂರವಾಣಿ ಸಮಸ್ಯೆ ಪರಿಹರಿಸಿ 15 ದಿನದಲ್ಲಿ ವರದಿ ನೀಡಲು ನಳಿನ್ ಆದೇಶ

ದೂರವಾಣಿ ಸಮಸ್ಯೆ ಪರಿಹರಿಸಿ 15 ದಿನದಲ್ಲಿ ವರದಿ ನೀಡಲು ನಳಿನ್ ಆದೇಶ

GK   ¦    Nov 13, 2017 07:54:06 PM (IST)
ದೂರವಾಣಿ ಸಮಸ್ಯೆ ಪರಿಹರಿಸಿ 15 ದಿನದಲ್ಲಿ ವರದಿ ನೀಡಲು ನಳಿನ್ ಆದೇಶ

ಸುಳ್ಯ: ಬಿಎಸ್ಎನ್ಎಲ್ ದೂರವಾಣಿ ಸಂಪರ್ಕದ ಬಗ್ಗೆ ಗ್ರಾಹಕರಿಂದ ಕೇಳಿ ಬಂದ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಂಡು 15 ದಿನದಲ್ಲಿ ವರದಿ ಸಲ್ಲಿಸಬೇಕು ಎಂದು ಟೆಲಿಕಾಂ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಬಿಎಸ್ಎನ್ಎಲ್ ಗ್ರಾಹಕರ ಸಂಪರ್ಕ ಸಭೆ ಮತ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಎಸ್ಎನ್ಎಲ್ ದೂರವಾಣಿ ಸಂಪರ್ಕಗಳ ಮತ್ತು ಇತರ ಸಮಸ್ಯೆಯ ಪರಿಶೀಲನೆಗೆ ವಿಶೇಷ ತಂಡ ರಚಿಸಲು ಸೂಚಿಸಿದ ಅವರು ಸಹಕಾರಿ ಸಂಘಗಳಿಗೆ ಆದ್ಯತೆಯ ಮೇರೆಗೆ ಓಎಫ್ಸಿ ಕೆಬಲ್ ಗಳನ್ನು ಅಳವಡಿಸಿ ದೂರವಾಣಿ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಒದಗಿಸಬೇಕು ಮತ್ತು ಬೇಡಿಕೆಗನುಸಾರವಾಗಿ ಕೇಬಲ್ ಅಳವಡಿಕೆ ಮಾಡಿ ಗ್ರಾಹಕರಿಗೂ ಸಂಪರ್ಕ ನೀಡಬೇಕು. ಕೆಟ್ಟು ಹೋದ ಎಲ್ಲಾ ಸ್ಥಿರ ದೂರವಾಣಿಯನ್ನೂ ದುರಸ್ಥಿ ಪಡಿಸಿ ಸಂಪರ್ಕ ನೀಡಬೇಕು ಎಂದು ಸೂಚಿಸಿದರು.

ಇಲಾಖೆಯನ್ನು ಜನಸ್ನೇಹಿಯಾಗಿ ಮಾಡಬೇಕೆಂಬ ದೃಷ್ಠಿಯಿಂದ ಬಿಎಸ್ಎನ್ಎಲ್ ಗ್ರಾಹಕರ ಸಮಸ್ಯೆಯನ್ನು ಅರಿಯಲು ಪ್ರಾಯೋಗಿಕವಾಗಿ ಗ್ರಾಹಕ ಸಂಪರ್ಕ ಸಭೆಯನ್ನು ನಡೆಸಲಾಗಿದೆ. ಇಂತಹ ಸಭೆ ಆಯೋಜನೆ ಮಾಡಬೇಕು ಎನ್ನುವುದು ಸರ್ಕಾರದ ನಿಯಮದಲ್ಲಿ ಇಲ್ಲ. ಆದರೂ ಜನರ ಸಮಸ್ಯೆಯನ್ನು ಆಲಿಸಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಟೆಲಿಕಾಂ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಈ ಸಭೆ ಹಮ್ಮಿಕೊಂಡಿದ್ದೇವೆ. ಇದು ಯಶಸ್ಸಿಯಾದರೆ ಇತರ ತಾಲೂಕಿನಲ್ಲಿ ಮತ್ತು ಗ್ರಾಮಾಂತರ ಮಟ್ಟದಲ್ಲಿ ಸಭೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು. ಹೆಚ್ಚು ಗ್ರಾಮೀಣ ಪ್ರದೇಶ ಮತ್ತು ದೂರವಾಣಿ ಸಂಪರ್ಕ ಸಮಸ್ಯೆ ಇರುವ ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಕೇಬಲ್ ಗಳನ್ನು ನೀಡಿ ಸ್ಥಿರ ದೂರವಾಣಿ ಸಂಪರ್ಕ ಸಮರ್ಪಕವಾಗಿಸಲು ಮತ್ತು ಹೆಚ್ಚು ಟವರ್ ಗಳನ್ನು ಒದಗಿಸಿ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ಹೆಚ್ಚಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದರು ಹೇಳಿದರು.

ಸಮಸ್ಯೆಗಳ ಸುರಿಮಳೆ:
ಬಿಎಸ್ಎನ್ಎಲ್ ಸ್ಥಿರ ದೂರವಾಣಿ, ಮೊಬೈಲ್ ಸಂಪರ್ಕ. ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಗಳ ಬಗ್ಗೆ ಸಮಸ್ಯೆಗಳ ದೊಡ್ಡಪಟ್ಟಿಯನ್ನೇ ಗ್ರಾಹಕರು ಸಭೆಯ ಮುಂದಿರಿಸಿದರು. ಕಳೆದ ಹಲವು ವರ್ಷಗಳಿಂದ ಸ್ಥಿರ ದೂರವಾಣಿ ಸಂಪರ್ಕ ಕಡಿತಗೊಂಡಿದ್ದರೂ ಅದನ್ನು ಸರಿಪಡಿಸುತ್ತಿಲ್ಲ. ಕೇಬಲ್ ಸಮಸ್ಯೆಯ ಹೆಸರಿನಲ್ಲಿ ದೂರವಾಣಿ ಸಂಪರ್ಕ, ಬ್ರಾಡ್ ಬ್ಯಾಂಡ್ ಸಂಪರ್ಕ ನೀಡುತ್ತಿಲ್ಲ ಮತ್ತು ಇರುವಂತಹ ಸಂಪರ್ಕವನ್ನು ಸರಿಪಡಿಸುತ್ತಿಲ್ಲ ಎಂದು ಗ್ರಾಹಕರು ದೂರಿದರು. ಹಲವು ಮೊಬೈಲ್ ಟವರ್ ಗಳಲ್ಲಿ ವಿದ್ಯುತ್ ಕಡಿತಗೊಂಡರೆ ಸಂಪರ್ಕ ಕಡಿತಗೊಳ್ಳುತ್ತದೆ, ಜನರೇಟರ್ ವ್ಯವಸ್ಥೆ ಮಾಡುತ್ತಿಲ್ಲ ಎಂದು ಹಲವು ಮಂದಿ ಗ್ರಾಹಕರು ಸಭೆಯ ಗಮನಕ್ಕೆ ತಂದರೆ, ಕರೆ ಕಡಿತಗೊಳ್ಳುವ ಬಗ್ಗೆ, ಇಂಟರ್ನೆಟ್ ಸ್ಪೀಡ್ ಇಲ್ಲದ ಬಗ್ಗೆ ಮತ್ತು ಸಂಪರ್ಕ ಕಡಿತಗೊಳ್ಳುತ್ತಿರುವ ಬಗ್ಗೆ ಹಲವು ಸಮಸ್ಯೆಗಳು ಗ್ರಾಹಕರಿಂದ ಕೇಳಿ ಬಂತು. ಗ್ರಾಹಕರ ಸಮಸ್ಯೆಗಳನ್ನು ಆಲಿಸಿದ ಸಂಸದರು ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

More Images