ನಾಲ್ಕು ಶಕ್ತಿದೇವತೆಗಳು ಮಡಿಕೇರಿ ದಸರಾ ರೂವಾರಿಗಳು..

ನಾಲ್ಕು ಶಕ್ತಿದೇವತೆಗಳು ಮಡಿಕೇರಿ ದಸರಾ ರೂವಾರಿಗಳು..

LK   ¦    Oct 11, 2018 12:08:24 PM (IST)
ನಾಲ್ಕು ಶಕ್ತಿದೇವತೆಗಳು ಮಡಿಕೇರಿ ದಸರಾ ರೂವಾರಿಗಳು..

ಮಡಿಕೇರಿ: ಮಡಿಕೇರಿಯಲ್ಲಿ ವಿಜಯದಶಮಿಯಂದು ನಾಲ್ಕು ಶಕ್ತಿದೇವತೆಗಳ ಕರಗೊಂದಿಗೆ ದಶಮಂಟಪಗಳ ಶೋಭಾಯಾತ್ರೆ ನಡೆಯುತ್ತದೆಯಾದರೂ, ದಸರಾ ಆರಂಭಗೊಳ್ಳುವುದು ಮಾತ್ರ ಮಡಿಕೇರಿ ನಗರದ ನಾಲ್ಕು ದಿಕ್ಕಿನಲ್ಲಿರುವ ಶಕ್ತಿದೇವತೆಗಳಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯಗಳ ಕರಗಗಳು ಹೊರಡುವ ಮೂಲಕವಾಗಿದೆ.

ಮಡಿಕೇರಿ ನಗರದಲ್ಲಿ ಕರಗ ಆಚರಣೆ ಜಾರಿ ಬರುವ ಮೂಲಕ ದಸರಾ ಆಚರಣೆ ಆರಂಭವಾಗಿದ್ದು ಇದಕ್ಕೆ ಶತಮಾನಗಳ ಇತಿಹಾಸ ಇರುವುದನ್ನು ನಾವು ಕಾಣಬಹುದಾಗಿದೆ. 

ಕರಗ ಆರಂಭವಾಗಿದ್ದು ಹೇಗೆ: ಸುಮಾರು 189 ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತಂತೆ. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆ ಹೋದರು. ಆಗ ಮಹಾಮಾರಿ ರೋಗಕ್ಕೆ ದುಷ್ಟ ಶಕ್ತಿಗಳು ಕಾರಣವಾಗಿದ್ದು, ಅದಕ್ಕೆ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ನಗರದಲ್ಲಿ ತಲೆದೋರಿರುವ ಸಾಂಕ್ರಾಮಿಕ ರೋಗ ನಿವಾರಣೆಯಾವುದಾಗಿ ತಿಳಿದು ಬಂತಂತೆ. ಅದರಂತೆ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರಡಿಸಿ ಪೂಜೆ ಸಲ್ಲಿಸುವ ಕಾರ್ಯ ಆರಂಭಿಸಲಾಯಿತು. 

ಪಾರ್ವತಿ ಅವತಾರದ ಶಕ್ತದೇವತೆಗಳು: ಈ ಕರಗ ಹೊರಡಿಸುವ ಸಂದರ್ಭ ಪೌರಾಣಿಕ ಹಿನ್ನಲೆಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಕೂಡ ಆಚರಣೆಗೆ ತರಲಾಯಿತು. ಅದೇನೆಂದರೆ ಹಿಂದೆ ಪಾರ್ವತಿಯು ದುಷ್ಟ ರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳಂತೆ ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಕ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದನಂತೆ. ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿಯೇ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯ ಜಾರಿಗೆ ತರಲಾಯಿತು ಎನ್ನಲಾಗಿದೆ. 

ರಾಮಮಂದಿರದಲ್ಲಿ ಮೊದಲ ಪೂಜೆ: ಆ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣುವಿನ ದೇವಾಲಯ ಇಲ್ಲದೆ ಇದ್ದುದರಿಂದಾಗಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಮಂದಿರವನ್ನು ನಿರ್ಮಿಸಿ ಅಲ್ಲಿ ರಾಮನ ಚಿತ್ರಪಟವನ್ನಿರಿಸಿ ಪೂಜಿಸಲಾಯಿತು. ಹಾಗೂ ನವರಾತ್ರಿ ಮೊದಲ ದಿನ ಮಡಿಕೇರಿಯ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಟ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ಕರಗಗಳು ದೊಡ್ಡಪೇಟೆಯ ಶ್ರೀರಾಮಮಂದಿರಕ್ಕೆ ತೆರಳಿ ಅಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ನಂತರ ನಗರ ಪ್ರದಕ್ಷಿಣೆ ಹೊರಡುವ ಧಾರ್ಮಿಕ ಸಂಪ್ರದಾಯವನ್ನು ರೂಢಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ನಡೆದುಕೊಂಡು ಬರುತ್ತಿದೆ.

ದಸರಾಗೆ ವಿದ್ಯುಕ್ತ ಚಾಲನೆ ಹೇಗೆ?

ನವರಾತ್ರಿಯ ಮೊದಲ ದಿನ (ಮಹಾಲಯ ಅಮವಾಸ್ಯೆಯ ಮಾರನೆಯ ದಿನ) ಸಂಜೆ ಸುಮೂಹೂರ್ತದಲ್ಲಿ ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಪಂಪಿನಕೆರೆಯಲ್ಲಿ ನೆರೆದ ಗಣ್ಯರ ಸಮ್ಮುಖದಲ್ಲಿ ಕರಗಪೂಜೆ ನಡೆಯುತ್ತದೆ. ಆ ನಂತರ ಕರಗ ಹೊರಡುತ್ತದೆ. ಅದು ಮಡಿಕೇರಿ ದಸರಾಕ್ಕೆ ವಿಧ್ಯುಕ್ತ ಚಾಲನೆಯೂ ಹೌದು.

ಆ ನಂತರ ಒಂಬತ್ತು ದಿನಗಳ ಕಾಲ ಕರಗವು ನಗರ ಪ್ರದಕ್ಷಿಣೆ ಹಾಕುತ್ತದೆ. ಈ ಸಂದರ್ಭ ನಗರದ ಎಲ್ಲಾ ಜನರು ಜಾತಿ ಬೇಧ ಮರೆತು ಕರಗ ಬರುವ ದಾರಿಯನ್ನು ಗುಡಿಸಿ, ಸಾರಿಸಿ ರಂಗೋಲಿಯಿಟ್ಟು ಬರಮಾಡಿಕೊಳ್ಳುತ್ತಾರೆ. ಅಲ್ಲದೆ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸುತ್ತಾರೆ. 

ಮಡಿಕೇರಿ ಕರಗ ಇದುವರೆಗೆ ನಿಂತಿಲ್ಲ: ಇಲ್ಲಿನ ಕರಗೋತ್ಸವದ ವಿಶೇಷವೆಂದರೆ 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಎಲ್ಲ್ಲ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ಪಲ್ಲಕ್ಕಿಗಳು ಮತ್ತು ಕರಗೋತ್ಸವ ಮಾತ್ರ ನಿಲ್ಲಲಿಲ್ಲ. 1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲೂ ಕರಗಗಳನ್ನು ಹೊರಡಿಸುವುದನ್ನು ಸ್ಥಗಿತಗೊಳಿಸಲಿಲ್ಲ. ಅಂದಿನಿಂದ ಇಂದಿನವರೆಗೂ ಕರಗೋತ್ಸವ ನಿರಂತರವಾಗಿ ನಡೆಯುತ್ತದೆ.

ದಸರಾ ದಿನದಂದು ನಡೆಯುವ ಮೆರವಣಿಗೆಯಲ್ಲಿಯೂ ಕರಗಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತಮ್ಮದೇ ಆದ ಧಾರ್ಮಿಕ ವಿಧಿ ವಿಧಾನಗಳೂ ಮೆರವಣಿಗೆಯಲ್ಲಿ ಕಂಡು ಬರುತ್ತದೆ.

 

ಮೆರವಣಿಗೆಯಲ್ಲಿ ನಿಯಮವೂ ಇದೆ: ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಯಾವ ಮಂಟಪವಾಗಲೀ ಇತರ ಕರಗಗಳಾಗಲೀ ಮೆರವಣಿಗೆಗೆ ಬರುವಂತಿಲ್ಲ. ಎಲ್ಲಾ ಕರಗಗಳೂ, ಮಂಟಪಗಳೂ ದಂಡಿನಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರ ಮೆರವಣಿಗೆಯಲ್ಲಿ ತೆರಳಿ ನಗರದ ಗದ್ದಿಗೆ ಬಳಿ ಬನ್ನಿ ಕಡಿಯಬೇಕೆಂಬ ನಿಯಮವಿದೆ. ಅದು ಇಂದಿಗೂ ಚಾಚುತಪ್ಪದೆ ನಡೆಯುತ್ತಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ನೋವಿನ ನಡುವೆಯೂ ಈ ಬಾರಿ ದಸರಾ ಸರಳ ಸಂಪ್ರದಾಯಬದ್ಧವಾಗಿ ನಡೆಯುತ್ತಿದೆ ಎನ್ನುವುದಷ್ಟೇ ಸಂತೋಷದ ವಿಚಾರವಾಗಿದೆ.