ದೀನದಲಿತರ ಸೇವೆಯೂ ದೇವರ ಪೂಜೆಯೇ - ಪೇಜಾವರ ಶ್ರೀ

ದೀನದಲಿತರ ಸೇವೆಯೂ ದೇವರ ಪೂಜೆಯೇ - ಪೇಜಾವರ ಶ್ರೀ

YK   ¦    Jan 12, 2018 11:13:48 AM (IST)
ದೀನದಲಿತರ ಸೇವೆಯೂ ದೇವರ ಪೂಜೆಯೇ - ಪೇಜಾವರ ಶ್ರೀ

ಉಡುಪಿ: ಇಲ್ಲಿನ ಪೇಜಾವರ ಮಠದ ವತಿಯಿಂದ ಕುಕ್ಕಿಕಟ್ಟೆ ಎಂಬಲ್ಲಿ ನಡೆಯುತ್ತಿರುವ ಅನಾಥ ಮಕ್ಕಳ ಶ್ರೀಕೃಷ್ಣ ಬಾಲನಿಕೇತನ ಸಂಸ್ಥೆಯಲ್ಲಿ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಪ್ರಥಮ ಹಂತವನ್ನು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಲ್ಲಿ ನಿರ್ಮಿಸಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮಂಗಳವಾರ ಉದ್ಘಾಟಿಸಿದರು.

ನಂತರ ಕೃಷ್ಣಮಠದಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರು ರಾಜೀವ್ ಚಂದ್ರಶೇಖರ್ ಅವರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇವರ ಪೂಜೆಯಲ್ಲಿ ಎರಡು ವಿಧಾನಗಳಿವೆ, ಒಂದು ಪುಷ್ಪ, ತುಳಸಿ, ಮಂತ್ರ, ಆರತಿಗಳ ಮೂಲಕ ಮಾಡುವ ಪೂಜೆ, ಇನ್ನೊಂದು ದೀನದಲಿತರರಿಗೆ ಉಪಕಾರ ಮಾಡುವ ಮೂಲಕ ಮಾಡುವ ಪೂಜೆ, ಇವೆರಡೂ ದೇವರಿಗೆ ನೇರವಾಗಿ ಸಲ್ಲುತ್ತವೆ. ರಾಜೀವ ಚಂದ್ರಶೇಖರ ಅವರು ಎರಡನೇಯ ವಿಧಾನವನ್ನು ಆರಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಈ ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಕಟ್ಟುವುದು ಕಡ್ಡಾಯವಾಗಿದೆ. ಅದೇ ರೀತಿ ಸಮಾಜ ಸೇವೆಯ ಮೂಲಕ ದೇವರಿಗೆ ತೆರಿಗೆ ಕಟ್ಟುವುದೂ ಕಡ್ಡಾಯವಾಗಿದೆ. ಅದಕ್ಕಾಗಿ ತಾವು ಮೈಸೂರಿನಲ್ಲಿ ವೃದ್ಧಾಶ್ರಮ ಮತ್ತು ಉಡುಪಿಯಲ್ಲಿ ದಲಿತರು ಮತ್ತು ಹಿಂದುಳಿದವರಿಗೆ ವಸತಿ ನಿಲಯಗಳನ್ನು ಕಟ್ಟಿದ್ದೇವೆ. ಪೇಜಾವರ ಕಿರಿಯ ಶ್ರೀಗಳು ಉಡುಪಿಯಲ್ಲಿ ಬುದ್ದಿಮಾಂಧ್ಯ ಮಕ್ಕಳಿಗೆ ಆಶ್ರಯಧಾನವನ್ನು ನಿರ್ಮಿಸಿದ್ದಾರೆ. ಇವೆಲ್ಲವೂ ಸಮಾಜದ ದಾನಿಗಳ ಸಹಾಯದಿಂದಲೇ ಸಾಧ್ಯವಾಗಿದೆ ಎಂದರು.

ಸನ್ಮಾನಕ್ಕೆ ಉತ್ತರಿಸಿದ ರಾಜೀವ ಚಂದ್ರಶೇಖರ್ ಅವರು, ಇದು ತಮ್ಮ ಜೀವನದ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ, ತಾವು ಮಾಡಿರುವ ಈ ಕೆಲಸಕ್ಕೆ ಸನ್ಮಾನವನ್ನು ನಿರೀಕ್ಷಿಸಿರಲಿಲ್ಲ. ಇದು ಇನ್ನೂ ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುವುದಕ್ಕೆ ತಮಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ತಾವು 32 ವರ್ಷಗಳ ಹಿಂದೆ ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾಗ ಕೃಷ್ಣಮಠಕ್ಕೆ ಭೇಟಿ ನೀಡುತ್ತಿದ್ದುದನ್ನು ಮತ್ತು ಆ ಸಂದರ್ಭದಲ್ಲಿ ರಥಬೀದಿಯಲ್ಲಿ ಖರೀದಿಸಿದ್ದ ಉಂಗುರಾಕೃತಿಯ ಲಾಕೆಟ್ ಇಂದಿಗೂ ಸದಾ ಧರಿಸುತ್ತಿರುವುದಾಗಿ ಹೇಳಿದರು ಮತ್ತು ತಮ್ಮ ಕುತ್ತಿಗೆಯಲ್ಲಿರುವುದನ್ನು ತೋರಿಸಿದರು.

ಈ ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ.ನಾರಾಯಣ್ ಉಪಸ್ಥಿತರಿದ್ದರು. ಶ್ರೀಕೃಷ್ಣ ಬಾಲನಿಕೇತನದ ಉಪಾಧ್ಯಕ್ಷ ಪ್ರೊ.ಕೆ.ಕಮಲಾಕ್ಷ ಸ್ವಾಗತಿಸಿದರು, ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಕೆ.ಎಸ್.ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇದಕ್ಕೆ ಮೊದಲು ಕುಕ್ಕಿಕಟ್ಟೆ ಬಾಲನಿಕೇತನ ಸಂಸ್ಥೆಯಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ಕಿರಿಯ ಸ್ವಾಮೀಜಿ ಅವರು, ಸಮಾಜಸೇವೆಯೂ ಕೃಷ್ಣ ಸೇವೆಯೇ ಆಗಿದೆ. ಅವಕಾಶ ವಂಚಿತ, ಅನಾಥ ಮಕ್ಕಳಿಗೆ ಸಹಾಯ ಮಾಡುವ, ಅವರಿಗೆ ಆಶ್ರಯ, ಶಿಕ್ಷಣ ಒದಗಿಸುವ ಕೆಲಸ ಅತ್ಯಂತ ಮಹತ್ವದ್ದು ಮತ್ತು ಹೃದಯವೈಶಾಲ್ಯದಿಂದ ಕೂಡಿರುವಂತಹದ್ದು, ಅಂತಹ ಕೆಲಸವನ್ನು ರಾಜೀವ ಚಂದ್ರಶೇಖರ್ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

 

More Images