ಲೋಕಸಭೆ ಚುನಾವಣೆ: ಗಡಿಪ್ರದೇಶದಲ್ಲಿ ಕಣ್ಗಾವಲು, ಚುರುಕಿನ ತಪಾಸಣೆ

ಲೋಕಸಭೆ ಚುನಾವಣೆ: ಗಡಿಪ್ರದೇಶದಲ್ಲಿ ಕಣ್ಗಾವಲು, ಚುರುಕಿನ ತಪಾಸಣೆ

GK   ¦    Mar 13, 2019 03:08:55 PM (IST)
ಲೋಕಸಭೆ ಚುನಾವಣೆ: ಗಡಿಪ್ರದೇಶದಲ್ಲಿ ಕಣ್ಗಾವಲು, ಚುರುಕಿನ ತಪಾಸಣೆ

ಸುಳ್ಯ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುತ್ತಲೂ ಕೇರಳದ ಸರಹದ್ದನ್ನು ಹೊಂದಿರುವ ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿ ಪ್ರದೇಶಗಳಲ್ಲಿ ಚುನಾವಣಾ ಆಯೋಗ ತೀವ್ರ ನಿಗಾ ಇಟ್ಟಿದ್ದು ಚುರುಕಿನ ತನಿಖೆ ನಡೆಸುತ್ತಿದ್ದಾರೆ.

ಸುಳ್ಯ ಕ್ಷೇತ್ರದ ಸರಹದ್ದಿನಲ್ಲಿ ಐದು ಕಡೆಗಳಲ್ಲಿ ಚುನಾವಣಾ ಚೆಕ್‍ ಪೋಸ್ಟ್ ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸುಳ್ಯ-ಕಾಸರಗೋಡು ರಸ್ತೆಯ ಗಡಿ ಪ್ರದೇಶವಾದ ಜಾಲ್ಸೂರಿನಲ್ಲಿ, ಸುಳ್ಯ-ಪಾಣತ್ತೂರು, ಸುಳ್ಯ-ಬಂದಡ್ಕ ರಸ್ತೆ ಸಂಧಿಸುವ ನಾರ್ಕೋಡಿನಲ್ಲಿ, ಸುಳ್ಯ-ಅಡೂರು ರಸ್ತೆಯ ಗಡಿ ಮಂಡೆಕೋಲಿನಲ್ಲಿ, ಸುಳ್ಯ ಮಡಿಕೇರಿ ರಸ್ತೆಯ ಕಲ್ಲುಗುಂಡಿಯಲ್ಲಿ ಮತ್ತು ಸುಳ್ಯ ವಿಧಾನಸಭಾ ಕ್ಷತ್ರದ ಗಡಿ ಗುಂಡ್ಯದಲ್ಲಿ ಚೆಕ್‍ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ.

ಈ ರಸ್ತೆಗಳ ಮೇಲೆ ಕಣ್ಗಾವಲು ಇರಿಸಿರುವ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಈ ಮಾರ್ಗಗಳಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಚುನಾವಣಾ ಸಂಬಂಧಪಟ್ಟು ಕರ್ನಾಟಕಕ್ಕೆ ಹಣ ಮತ್ತಿತರ ಉಡುಗೊರೆ ವಸ್ತುಗಳ ಸಾಗಾಟ ನಡೆಸುವ ಸಾಧ್ಯತೆ ಇದ್ದು, ಇದನ್ನು ತಡೆಯುವ ದೃಷ್ಠಿಯಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾದ ಕೂಡಲೇ ಚೆಕ್‍ಪೋಸ್ಟ್ ಸ್ಥಾಪಿಸಿ ಗಡಿಯಲ್ಲಿ ಕಣ್ಗಾವಲು ಏರ್ಪಡಿಸಲಾಗಿದೆ. ಹಿಂದೆಲ್ಲ ಚುನಾವಣೆ ನಡೆಯುವ ಒಂದೆರಡು ದಿನ ಮೊದಲು ಮಾತ್ರ ಗಡಿ ಪ್ರದೇಶದಲ್ಲಿ ವಾಹನ ತಪಾಸಣೆ ಮಾಡಲಾಗುತ್ತಿತ್ತು. ಆದರೆ 2103ರ ಚುನಾವಣೆಯ ಬಳಿಕ ನೀತಿ ಸಂಹಿತೆ ಜಾರಿಯಾದ ಕೂಡಲೇ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಪ್ರತಿ ವಾಹನವನ್ನೂ ಅದರಲ್ಲಿರುವ ಮೂಟೆ ಅಥವಾ ವಸ್ತುಗಳನ್ನು ಪರಿಶೀಲಿಸಿ ವಾಹನದ ಸಂಖ್ಯೆಯನ್ನು ದಾಖಲಿಸಿ ಬಿಡಲಾಗುತ್ತದೆ.

ಸುಳ್ಯ-ಕಾಸರಗೋಡು ಹೆದ್ದಾರಿಯಲ್ಲಿ ಜಾಲ್ಸೂರು ಪ್ರಮುಖ ಕೇಂದ್ರ. ಇಲ್ಲಿ ಆಯೋಗದ ವತಿಯಿಂದ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅರಣ್ಯ ಇಲಾಖೆಯ ಚೆಕ್‍ಪೋಸ್ಟ್ ಮೊದಲೇ ಇದ್ದು ಇಲ್ಲಿ ತಪಾಸಣೆ ನಡೆಸಲಾಗುತ್ತದೆ. ಜಾಲ್ಸೂರಿನಲ್ಲಿ ಪೊಲೀಸ್ ಇಲಾಖೆ ಅಳವಡಿಸಲಾದ ಸಿಸಿ ಕ್ಯಾಮರಾದಲ್ಲೂ ಸಂಚರಿಸುವ ವಾಹನಗಳು ದಾಖಲಾಗುತ್ತಿದೆ. ಎಲ್ಲಾ ರಸ್ತೆಗಳಲ್ಲಿಯೂ ರಾತ್ರಿ ಹಗಲೆನ್ನದೆ ಅಧಿಕಾರಿಗಳ ತಂಡ ಬೀಡು ಬಿಟ್ಟು ತಪಾಸಣೆ ನಡೆಸಲಾಗುತ್ತಿದೆ. ನೆರೆಯ ಕೇರಳದಿಂದ ಕರ್ನಾಟಕಕ್ಕೆ ಹಣ, ಮದ್ಯ, ಉಡುಗೊರೆ ವಸ್ತುಗಳು ಸಾಗಾಟ ಮಾಡುವ ಸಾಧ್ಯತೆ, ನಕಲಿ ಮತದಾನ ಮಾಡುವುದನ್ನು ತಡೆಯಲು ಮತ್ತು ಚುನಾವಣಾ ಅಕ್ರಮ ನಡೆಸುವುದನ್ನು ತಡೆಯಲು ಗಡಿಯಲ್ಲಿ ಬಿರುಸಿನ ತಪಾಸಣೆ ನಡೆಸಲಾಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ತಂಡವನ್ನೇ ರಚಿಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಪ್ರದೇಶಗಳಿಂದ ಕೃಷಿ ಉತ್ಪನ್ನ ಮತ್ತಿತರ ವಸ್ತುಗಳೊಂದಿಗೆ ಜೀಪು ಮತ್ತಿತರ ವಾಹನಗಳಲ್ಲಿ ಬರುವವರು ತಪಾಸಣೆ ನೋಡಿ ಕುತೂಹಲ ಭರಿತರಾಗಿ, ಸ್ವಲ್ಪ ಭಯದಿಂದ ವೀಕ್ಷಸುವುದು ಕಂಡು ಬರುತ್ತದೆ. ಕೆಲವರು ತಪಾಸಣೆ ನೋಡಿ ಸಾಮಾನ್ಯ ಜನರು ಗಲಿಬಿಲಿಗೊಳ್ಳುವುದೂ ಇದೆ. ಚುನಾವಣಾ ಸಂಬಂದಪಟ್ಟು ನಡೆಯುವ ಮಾಮೂಲಿ ತಪಾಸಣೆ ಇದಾಗಿದ್ದು ಜನಸಾಮಾನ್ಯರು ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ಸುಳ್ಯ ಕ್ಷೇತ್ರದ ಗಡಿಯಲ್ಲಿ ಐದು ಕಡೆಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಚುನಾವಣೆ ಮುಗಿಯುವವರೆಗೆ ದಿನದ 24 ಗಂಟೆಯೂ ಕಾರ್ಯಾಚರಣೆ ನಡೆಸಲಿದೆ. ಇಲ್ಲಿಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು ಮೂರು ಶಿಫ್ಟ್ ನಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದ್ದಾರೆ.

More Images