ಚರಂಡಿ ನೀರು ಹರಿದು ಕೃತಕ ನೆರೆಯಿಂದ ರಸ್ತೆಗಳೆಲ್ಲ ಹೊಂಡಮಯ!

ಚರಂಡಿ ನೀರು ಹರಿದು ಕೃತಕ ನೆರೆಯಿಂದ ರಸ್ತೆಗಳೆಲ್ಲ ಹೊಂಡಮಯ!

DA   ¦    Jul 11, 2019 08:10:19 PM (IST)
ಚರಂಡಿ ನೀರು ಹರಿದು ಕೃತಕ ನೆರೆಯಿಂದ ರಸ್ತೆಗಳೆಲ್ಲ ಹೊಂಡಮಯ!

ಬೆಳ್ತಂಗಡಿ: ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪಟ್ಟಣದ ಚರಂಡಿಗಳಲ್ಲಿ ನೀರು ಹರಿಯುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ. ಈ ಮಾಹಿತಿ ಅಧಿಕಾರಿಗಳಿಗೆ ಗೊತ್ತಿದ್ದರೂ ಚರಂಡಿ ರಿಪೇರಿ ಮಾಡಲು ಮೀನಮೇಷ ಎಣಿಸುವುದು ಜನತೆಯ ದೌರ್ಬಾಗ್ಯವೆಂದೇ ಹೇಳಬೇಕು. ಎಂದಿನಂತೆ ಈ ವರ್ಷವೂ ರಸ್ತೆಗಳಲ್ಲಿ ಕೃತಕ ನೆರೆ ಹರಿದಿದೆ.

ಗುರುವಾಯನಕೆರೆ- ಉಪ್ಪಿನಂಗಡಿ ರಸ್ತೆ, ಉಜಿರೆಯಿಂದ- ಬೆಳ್ತಂಗಡಿ ರಸ್ತೆ ಸೇರಿದಂತೆ ನಗರ ಪಂಚಾಯತ್ ವ್ಯಾಪ್ತಿಯ ರಸ್ತೆಗಳಲ್ಲಿ ಹೂಳು ಎತ್ತದೆ ರಸ್ತೆಯಲ್ಲೇ ಕೆಸರು ನೀರು ಆವರಿಸುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನ.ಪಂ. ವ್ಯಾಪ್ತಿ ಹಾಗೂ ಮುಖ್ಯ ರಸ್ತೆ ಚರಂಡಿ ಹೂಳೆತ್ತಲು 7 ಲಕ್ಷ ರೂ. ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆಯೂ ಮುಗಿದಿತ್ತು. ಆದರೆ ಮಳೆ ಆರಂಭವಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ನೀರು ರಸ್ತೆಯಲ್ಲಿ ಹರಿದು ಈಗಿರುವ ರಸ್ತೆಗಳು ಹೊಂಡ ಬೀಳುವ ಸಾಧ್ಯತೆ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಗುರುವಾಯನಕೆರೆ ಹೊಸಂಗಡಿ, ವೇಣೂರು, ನಾರವಿ ಉಜಿರೆಯಿಂದ ಕೊಕ್ಕಡ ರಸ್ತೆ ಚರಂಡಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪಿಡಬ್ಲಲ್ಯುಡಿ ಇಂಜಿನಿಯರ್ ಶಿವಪ್ರಸಾದ್ ಅಜಿಲ ತಿಳಿಸಿದ್ದಾರೆ.

ಆದರೆ ಪ್ರಸ್ತುತ ಒಂದು ತಾಸು ಮಳೆ ಸುರಿದಲ್ಲಿ ಉಪ್ಪಿನಂಗಡಿ- ಗುರುವಾಯನಕೆರೆ, ಗುರುವಾಯನಕೆರೆ- ಬೆಳ್ತಂಗಡಿ, ಬೆಳ್ತಂಗಡಿ- ಉಜಿರೆ, ಗುರುವಾಯನಕೆರೆ- ನಾರಾವಿ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಕೆಸರು ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ವಾಹನ ಸವಾರರು ಹೇಳುತ್ತಿದ್ದಾರೆ.

ಮಂಗಳವಾರ ಸುರಿದ ಮಳೆಗೆ ಉಜಿರೆ ಮುಖ್ಯರಸ್ತೆ ಬೆಳಾಲು ಕ್ರಾಸ್ ಸಮೀಪ ಚರಂಡಿ ಕಟ್ಟಿದ್ದರಿಂದ ರಸ್ತೆಯಲ್ಲಿ ಒಂದಡಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಮತ್ತೊಂದೆಡೆ ಉಜಿರೆ ಭಾರತ್ ಐರನ್ ವರ್ಕ್ ಸಮೀಪ ನೂರು ಮೀಟರ್ ರಸ್ತೆ ಕಾಣದಂತೆ ಕೆಸರು ನೀರು ಆವರಸಿತ್ತು. ಹೂಳೆತ್ತದೆ ಚರಂಡಿ ಕಟ್ಟಿರುವ ಪರಿಣಾಮ ಪ್ರತಿ ವರ್ಷ ಸಮಸ್ಯೆಯಾಗುತ್ತಿದ್ದರು ಸ್ಥಳೀಯಾಡಳಿತ ರಾಜ್ಯ ಹೆದ್ದಾರಿ ಪ್ರಾಧಿಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ.

ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣ ಬಳಿ ನೀರು ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದೆ ಪಾದಚಾರಿಗಳಿಗೆ ವಾಹನಗಳಿಂದ ಜಲಾಭಿಷೇಕವಾಗುತ್ತಿದೆ. ಮುಖ್ಯ ರಸ್ತೆಯಿಂದ ಗುರುನಾರಾಯಣ ಸಭಾಭವನ, ಖಾಸಗಿ ಬಸ್ ನಿಲ್ದಾಣ ತಿರುವು ಪಡೆಯುವಲ್ಲಿ ಕಂದಕಗಳು ನಿರ್ಮಾಣವಾಗುವ ಹಂತ ತಲುಪಿದೆ. ಮತ್ತೊಂದೆಡೆ ಮಿನಿ ವಿಧಾನ ಸೌಧ ಮುಂಭಾಗವೇ ಚರಂಡಿ ಹೂಳೆತ್ತದೆ ಪೊದೆ ನಿರ್ಮಾಣವಾಗಿದ್ದು, ನ.ಪಂ. ಇತ್ತ ಗಮನ ಹರಿಸಿಲ್ಲ.

ಈಗಾಗಲೇ ವಾರ್ಡ್ ಹಂತದಲ್ಲಿ ಎರಡು ತಂಡವಾಗಿಸಿ ಚರಂಡಿ ದುರಸ್ತಿ ಮಾಡಲಾಗುತ್ತಿದೆ. ಕೋರ್ಟ್‍ರಸ್ತೆ, ಕುತ್ಯಾರು, ಸುದೆಮುಗೇರು, ಚರ್ಚ್ ರಸ್ತೆ ಸ್ವಚ್ಛಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಪಟ್ಟಣ ವ್ಯಾಪ್ತಿ ಹಾಗೂ ವಿಧಾನ ಸೌಧ ಮುಂಭಾಗ ಸ್ವಚ್ಛತೆ ಹಮ್ಮಿಕೊಳ್ಳಲಾಗುತ್ತದೆ.
ಮಹಾವೀರ ಆರಿಗ, ಕಿರಿಯ ಅಭಿಯಂತರರು, ನ.ಪಂ.