ಮೂಡುಬಿದಿರೆ ತಾಲೂಕು ಲಾಕ್ ಡೌನ್ ..

ಮೂಡುಬಿದಿರೆ ತಾಲೂಕು ಲಾಕ್ ಡೌನ್ ..

DSK   ¦    Mar 24, 2020 09:55:24 AM (IST)
ಮೂಡುಬಿದಿರೆ ತಾಲೂಕು ಲಾಕ್ ಡೌನ್ ..

ಮೂಡುಬಿದಿರೆ: ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕಳೆದ ರವಿವಾರದಂದು ಜನತಾ ಕಫ್ರ್ಯೂಗೆ ಅಮೋಘ ಬೆಂಬಲ ನೀಡಿದ್ದ ಮೂಡುಬಿದಿರೆ ತಾಲೂಕು ಸೋಮವಾರ ಒಂದಿಷ್ಟು ಚಟುವಟಿಕೆಗಳಿಗೆ ತೆರೆದುಕೊಂಡಿತಾದರೂ ಅಪರಾಹ್ನದ ವೇಳೆಗೆ ಲಾಕ್‍ಡೌನ್‍ನತ್ತ ವಾಲಿತ್ತು. ಮಂಗಳವಾರ ರಾಜ್ಯ ಸರ್ಕಾರ ಘೋಷಣೆಯಂತೆ ಮಂಗಳವಾರವೂ ಬಂದ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕೂಡಾ ಲಾಕ್ ಡೌನ್ ಆಗಿದೆ ಎನ್ನುವ ಸುದ್ದಿ ಬಿತ್ತರವಾಗುತ್ತಿದ್ದಂತೆ ಪೋಲೀಸರು ಸಕ್ರಿಯರಾಗಿ ಮಧ್ಯಾಹ್ನದಿಂದ ಕಾನೂನು ಪಾಲನೆಗೆ ಒತ್ತು ನೀಡಿದ್ದಾರೆ.

ಬೆಳಿಗ್ಗೆಯಿಂದ ಖಾಸಗಿ ಬಸ್ಸುಗಳು ಬೀದಿಗಿಳಿಯದೇ ಜನ ಸಂಚಾರ ಕಡಿತಗೊಂಡಿತ್ತು. ಶಿಕ್ಷಣ ಸಂಸ್ಥೆಗಳೂ ಸೇರಿದಂತೆ ಹೆಚ್ಚಿನವರು ಅಂಗಡಿಗಳನ್ನು ತೆರೆದಿರಲಿಲ್ಲ. ಸರ್ಕಾರಿ ಕಛೇರಿಗಳು, ಬ್ಯಾಂಕುಗಳೂ ತೆರೆದಿದ್ದರೂ ಗ್ರಾಹಕರ ಒತ್ತಡ ಇರಲಿಲ್ಲ. ದಿನಸಿ ಅಂಗಡಿಗಳು, ಹಾಲು,ಪೇಪರ್ಸ್, ಮೆಡಿಕಲ್, ಪೆಟ್ರೋಲ್ ಪಂಪ್ ಹೀಗೆ ಅಗತ್ಯ ಸೇವೆಗಳು ಲಭ್ಯವಾಗುತ್ತಿವೆ. ಉಳಿದಂತೆ ಪೇಟೆಯಲ್ಲಿ ಬೆಳಗ್ಗೆ ಒಂದಷ್ಟು ಜನಸಂಚಾರವಿತ್ತು. ಒಂದಷ್ಟು ರಿಕ್ಷಾಗಳು ಬಾಡಿಗೆಗೆ ಕಾಣಿಸಿಕೊಂಡವು. ಅಗತ್ಯವಿದ್ದವರು, ಇಲ್ಲದವರೂ ಪೇಟೆಯಲ್ಲಿ ಕಾಣಿಸಿಕೊಂಡದ್ದು ಸಂಜೆ ವೇಳೆಗೆ ಪೋಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದು ನಂತರ ಜನ ಸಂಚಾರ ವಿರಳವಾಗಿದೆ.

ಕೊರೋನಾ ಬಗ್ಗೆ ಭಯ ಬೇಡ, ಎಚ್ಚರವಿರಲಿ. ಅಗತ್ಯ, ತುರ್ತು ಸೇವೆ ಹೊರತುಪಡಿಸಿ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಮಾ 31ರವರೆಗೆ ನಿರ್ಬಂಧಿಸಿದೆ. ವಿದೇಶದಿಂದ ಬಂದಿರುವ ಎಲ್ಲರೂ ಕಡ್ಡಾಯವಾಗಿ 14 ದಿನ ಮನೆಯೊಳಗಿರಿ. ಯಾರನ್ನೂ ಭೇಟಿಯಾಗಕೂಡದು ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ನಡುವೆ ಕೆಲವೆಡೆ ವಿದೇಶದಿಂದ ಹುಟ್ಟೂರಿಗೆ ಮರಳಿದ್ದ ಕೆಲವರು ತಪಾಸಣೆಗೊಳಪಟ್ಟು ಕೈಗೆ ಮುದ್ರೆ ಹಾಕಿಸಿಕೊಂಡು ಕಡ್ಡಾಯವಾಗಿ 14 ದಿನ ಮನೆಯೊಳಗಿರಬೇಕೆಂಬ ನಿಯಮ ಉಲ್ಲಂಘನೆಗೆ ಮುಂದಾಗಿದ್ದರೂ ಪೋಲೀಸರು ಸಕಾಲದಲ್ಲಿ ಕ್ರಮ ಕೈಗೊಂಡಿದ್ದಾರೆ. ಮಂಗಳವಾರವೂ ಕೂಡಾ ಪೇಟೆ ಬಂದ್ ಆಗಲಿದೆ.