ಬೆಳ್ತಂಗಡಿ ತಾಲೂಕು ಸಮುದಾಯ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು

ಬೆಳ್ತಂಗಡಿ ತಾಲೂಕು ಸಮುದಾಯ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು

DA   ¦    Mar 26, 2020 06:07:30 PM (IST)
ಬೆಳ್ತಂಗಡಿ ತಾಲೂಕು ಸಮುದಾಯ ಆಸ್ಪತ್ರೆ ಕೊರೋನಾ ಸೋಂಕಿತರಿಗೆ ಮೀಸಲು

ಬೆಳ್ತಂಗಡಿ: ತಾಲೂಕು ಸಮುದಾಯ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೊರೋನಾ ಶಂಕಿತರ ಶುಶ್ರೂಷೆಗೆ ಮೀಸಲಿಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇಲ್ಲಿ ಇತರ ಹೊರ ರೋಗಿಗಳಿಗೆ ಪರೀಕ್ಷಿಸಿ, ಒಳ ರೋಗಿಗಳಾಗಿ ಚಿಕಿತ್ಸೆ ನೀಡಲು ಸರಕಾರಿ ಆಸ್ಪತ್ರೆ ವೈದ್ಯರು ಸೂಚಿಸಿದರೆ ಅಂತಹ ರೋಗಿಗಳಿಗೆ ತಾಲೂಕಿನ ವಿವಿಧ ಆರು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಉಚಿತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಮಿನಿ ವಿಧಾನ ಸೌಧ ಕಟ್ಟಡದಲ್ಲಿ  ಕೊರೋನಾ ವಾರ್ ರೂಮ್ (ತುರ್ತು ಪಡೆ) ರಚಿಸಲಾಗಿದ್ದು ಗುರುವಾರದಿಂದಲೇ ಆರಂಭಿಸಲಾಗಿದ್ದು, ಈ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯ ವಸ್ತುಗಳ ಅಲಭ್ಯತೆ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಸಮುದಾಯ ಆಸ್ಪತ್ರೆಗೆ ಬೇರೆ ಯಾವುದೇ ಚಿಕಿತ್ಸೆಗಾಗಿ ಬರುವ ಹೊರರೋಗಿಗಳಿಗೆ ವೈದ್ಯರು ಪರೀಕ್ಷಿಸಿ, ಚಿಕಿತ್ಸೆ ನೀಡಲಾಗುತ್ತದೆ. ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯಬೇಕಾದರೆ ಇಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ತಾಲೂಕಿನ ವಿವಿಧ ಆರು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಈಗಾಗಲೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಇನ್ನಿತರೇ ಕಾಯಿಲೆಯ ರೋಗಿಗಳನ್ನು ತಾಲೂಕಿನ ಆರು ಖಾಸಗಿ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಅವರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಬುಧವಾರ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ ಶಾಸಕರು ಕೊರೋನಾ ವೈರಸ್ ನಿಗ್ರಹ ಹಾಗೂ ಲಾಕ್ ಡೌನ್ ಕುರಿತು ವಿವಿಧ ಇಲಾಖೆಗಳ ತಯಾರಿಗಳ ವರದಿ ಹಾಗೂ ಮಾಹಿತಿಯನ್ನು ಪಡಕೊಂಡರು. ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರೀ, ತಾಪಂ. ಇಒ ಕೆ.ಇ. ಜಯರಾಮ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿ, ಸಮುದಾಯ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಿದ್ಯಾವತಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಬೆಳ್ತಂಗಡಿ ಪ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್. ಇದ್ದರು.

ಇದೀಗ ಬೆಳ್ತಂಗಡಿ ತಾಲೂಕಿನಲ್ಲೂ ಕೊರೋನಾ ವೈರಸ್ ತಟೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗಿದ್ದು, ತಾಲೂಕಿನ ಮಿನಿ ವಿಧಾನಸೌಧದಲ್ಲಿ `ವಾರ್ ರೂಮ್' ಎಂಬ ವಿಶೇಷ ಸಹಾಯವಾಣಿ ಕೊಠಡಿಯನ್ನು ತೆರೆಯಲಾಗಿದೆ. ಇದಕ್ಕಾಗಿ ಶಾಸಕ ಹರೀಶ್ ಪೂಂಜಾ ಅವರು ಒಂದು ವಿಶೇಷ ಪಡೆಯನ್ನೇ ರಚಿಸಿದ್ದಾರೆ. ಇದು ಗುರುವಾರದಿಂದಲೇ ಆರಂಭಗೊಂಡಿದ್ದು, ವಾರ್ ರೂಂನಲ್ಲಿ ಕಾರ್ಯಾಚರಿಸುವ ಸಿಬ್ಬಂದಿಗಳಿಗೆ ಶಾಸಕ ಹರೀಶ್ ಪೂಂಜ ಹಾಗೂ ತಹಸೀಲ್ದಾರ್ ಗಣಪತಿ ಶಾಸ್ತ್ರೀಯವರು ಸೂಕ್ತ ಮಾಹಿತಿಯ ಜತೆಗೆ ಸೂಚನೆಯನ್ನು ನೀಡಿದರು.

ಈ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಮತ್ತು ಅಗತ್ಯ ವಸ್ತುಗಳ ಅಲಭ್ಯತೆ ಸಮಸ್ಯೆಗಳಿದ್ದರೆ ಪರಿಹಾರ ಕಂಡುಕೊಳ್ಳಬಹುದಾಗಿದೆ.  ಕೊರೊನಾ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಶಾಸಕರ ಆಪ್ತ ಸಹಾಯಕ ಅಥವಾ ಸಿಬ್ಬಂದಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಿಬ್ಬಂದಿಗಳನ್ನೊಳಗೊಂಡ ಕೊರೊನಾ ವಾರ್ ರೂಮ್ ದಿನದ ಇಪ್ಪತ್ತಾನಾಲ್ಕು ಗಂಟೆಯೂ ಕಾರ್ಯಚರಿಸಲಿದೆ. ತುರ್ತು ಕರೆಗಾಗಿ ದೂರವಾಣಿ ಸಂಖ್ಯೆ: 08256-232047 ಮತ್ತು 9901212207 ನಂಬರ್‍ಗೆ ತಾಲೂಕಿನ ಜನತೆ ಕರೆಮಾಡಬಹುದು. ತಾ.ಪಂ. ಇಒ ಮೂಲಕ ಎಲ್ಲ ಪಿಡಿಒಗಳಿಗೆ, ತಹಸೀಲ್ದಾರರ ಮೂಲಕ ಎಲ್ಲ ವಿ.ಎ.ಗಳಿಗೆ ಸೂಚನೆ ನೀಡಲು ಕ್ರಮ ಕೈಗೊಳ್ಳಲಾಗಿದೆ.