ಬೆಳ್ತಂಗಡಿಯ ಬಾಡಿಗೆ ಮನೆಯಲ್ಲಿ ಜೋಡಿ ಆತ್ಮಹತ್ಯೆ

ಬೆಳ್ತಂಗಡಿಯ ಬಾಡಿಗೆ ಮನೆಯಲ್ಲಿ ಜೋಡಿ ಆತ್ಮಹತ್ಯೆ

DA   ¦    Apr 15, 2019 06:08:19 PM (IST)
ಬೆಳ್ತಂಗಡಿಯ ಬಾಡಿಗೆ ಮನೆಯಲ್ಲಿ ಜೋಡಿ ಆತ್ಮಹತ್ಯೆ

ಬೆಳ್ತಂಗಡಿ: ಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡು ಘಟನೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಡುಮನೆ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಘಟನೆ ಬೆಳಗ್ಗೆ ಬೆಳಕಿಗೆ ಬಂದಿದೆ.

ರೆಂಕೆದಗುತ್ತು ನಿವಾಸಿ ಕಿರಣ್ ಶೆಟ್ಟಿ(32) ಹಾಗೂ ಲಾಯಿಲ ಪುತ್ರಬೈಲು ನಿವಾಸಿ ಸಂಗೀತ (20)ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಿರಣ್ ಎಂಬುವರು ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೂಡಿಗೆರೆ ಬಣಕಲ್ ನಿವಾಸಿ ಲವೀನಾ ಎಂಬಾಕೆಯನ್ನು ಪ್ರೇಮಿಸಿ ವಿವಾಹವಾಗಿದ್ದರು. ಈ ಹಿಂದೆ ಬೇರೊಂದು ಯುವತಿಯೊಂದಿಗೆ ವಿವಾಹವಾಗಿ ಬಳಿಕ ವಿಚ್ಚೇದನ ಪಡೆದುಕೊಂಡಿದ್ದರು. ಇದೀಗ ಇನ್ನೊಬ್ಬ ಯುವತಿ ಸಂಗೀತ ಎಂಬಾಕೆಯನ್ನು ಪ್ರೇಮಿಸಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದರಿಂದ ಪರಸ್ಪರ ಕುಟುಂಬದೊಳಗೆ ಕಲಹಗಳು ನಡೆಯುತ್ತಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದ ಕಿರಣ್ ಮನೆಯವರೊಂದಿಗೆ ಬೆರೆಯುತ್ತಿರಲಿಲ್ಲ. ಇತ್ತೀಚೆಗೆ ಸಹೋದರಿಯ ಮದುವೆಯಾಗಿದ್ದು, ಮದುವೆ ದಿನ ಮಾತ್ರ ಮನೆಗೆ ಹೋಗಿದ್ದ. ಉಳಿದಂತೆ ಪ್ರತ್ಯೇಕವಾಗಿಯೇ ವಾಸವಾಗಿದ್ದ. ಈತ ಕಳೆದ ಎರಡು ತಿಂಗಳ ಹಿಂದೆ ಬಣಕಲ್ ನಿವಾಸಿ ಲವಿನಾ ಎಂಬಾಕೆಯನ್ನು ವಿವಾಹವಾಗಿದ್ದು, ಬೆಳ್ತಂಗಡಿ ನಗರ ವ್ಯಾಪ್ತಿಯ ನಡುಮನೆ ಎಂಬಲ್ಲಿ ಬಾಡಿಗೆ ರೂಮ್‍ನಲ್ಲಿ ವಾಸವಾಗಿ ಮದುವೆಯಾದ ಬಳಿಕ ಲಾಯಿಲ ಪುತ್ರಬೈಲು ನಿವಾಸಿ ಸಂಗೀತ ಎಂಬವರನ್ನು ಪ್ರೀತಿಸಿದ್ದು, ಈಕೆಯನ್ನು ಮದುವೆಯಾಗುವ ಸಂಚು ರೂಪಿಸಿದ್ದ. ಆದರೆ ಈತನ ಎರಡನೇ ಪತ್ನಿ ಇದಕ್ಕೆ ವಿರೋಧ ಮಾಡಿದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ.

ಸಂಗೀತಾಳ ಮನೆಗೆ ಕರೆದುಕೊಂಡು ಬರುವ ಬಗ್ಗೆ ಈತನಲ್ಲಿ ವಿಚಾರಿಸಿದಾಗ ನಾನು ಅವಳಿಗೆ ತುಂಬಾ ಉಪಕಾರ ಮಾಡಿದ್ದೇನೆ. ಅದಕ್ಕಾಗಿ ನನ್ನ ಮೇಲೆ ವಿಶೇಷ ಅಭಿಮಾನವಿದೆ. ಹಾಗಾಗಿ ಮನೆಗೆ ಬರುತ್ತಿದ್ದಾಳೆ ಎಂದು ಸುಳ್ಳು ಹೇಳುತ್ತಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಭಾನುವಾರ ರಾತ್ರಿ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಆತ ಎರಡನೇ ಪತ್ನಿ ಲವಿನಾಳ ಮೇಲೆ ಹಲ್ಲೆ ನಡೆಸಿ ಕೈ, ಬಾಯಿಯನ್ನು ಬಟ್ಟೆಯಿಂದ ಕಟ್ಟಿಹಾಕಿದ. ಇದರಿಂದ ಹೇಗೋ ತಪ್ಪಿಸಿಕೊಂಡ ಲವಿನಾ ಬೆಳ್ತಂಗಡಿ ಪೋಲೀಸ್ ಠಾಣೆಗೆ ತಡರಾತ್ರಿ ದೂರು ನೀಡಲು ಹೋಗಿದ್ದು, ಪೊಲೀಸರು ಅವಳನ್ನು ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆದರೆ ಲವಿನಾ ಹೆದರಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದು, ಸೋಮವಾರ ಬೆಳಗ್ಗೆ ಬರುವಾಗಲೇ ಈತ ಹಾಗೂ ಇನ್ನೋರ್ವ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಬೆಳ್ತಂಗಡಿ ಎಸ್‍ಐ ರವಿ ಡಿ.ಎಸ್ ಭೇಟಿ ನೀಡಿದ್ದು, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.