ಸುಳ್ಯದಲ್ಲಿ ಶಾಸಕರ ನೇತೃತ್ವದಲ್ಲಿ ಕರೋನಾ ಜಾಗೃತಿ ಸಭೆ

ಸುಳ್ಯದಲ್ಲಿ ಶಾಸಕರ ನೇತೃತ್ವದಲ್ಲಿ ಕರೋನಾ ಜಾಗೃತಿ ಸಭೆ

GK   ¦    Mar 26, 2020 05:15:25 PM (IST)
ಸುಳ್ಯದಲ್ಲಿ ಶಾಸಕರ ನೇತೃತ್ವದಲ್ಲಿ ಕರೋನಾ ಜಾಗೃತಿ ಸಭೆ

ಸುಳ್ಯ: ಕರೋನಾ ವೈರಸ್ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಜನತೆಗೆ ಅಗತ್ಯ ವಸ್ತುಗಳಿಗೆ ಕೊರತೆ ಆಗುವುದಿಲ್ಲ. ಆಹಾರ ವಸ್ತುಗಳು ಸೇರಿದಂತೆ ಸಾಕಷ್ಟು ಅಗತ್ಯ ವಸ್ತುಗಳ ಸರಬರಾಜು ಸರಾಗವಾಗಿ ನಡೆಯಲಿದೆ ಎಂದು ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಳ್ ಹೇಳಿದ್ದಾರೆ.

ಸುಳ್ಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಅಂಗಾರ ನೇತೃತ್ವದಲ್ಲಿ ನಡೆದ ಕರೋನಾ ವೈರಸ್ ತಡೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಸುಳ್ಯ ನಗರದ ವರ್ತಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ದಿನಸಿ ಸಾಮಾಗ್ರಿಗಳು, ತರಕಾರಿ, ಔಷಧಿ, ಇಂಧನ, ಪಡಿತರ ಸೇರಿದಂತೆ ಅಗತ್ಯ ವಸ್ತುಗಳ ವಿತರಣೆಗೆ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಮಯ ನಿಗದಿ ಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಾತ್ರ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಬೇಕು. ಆದರೆ ಅಗತ್ಯ ವಸ್ತುಗಳ ಸಾಗಾಟಕ್ಕೆ ಯಾವುದೇ ಸಮಯದ ನಿರ್ಬಂಧ ಇಲ್ಲ ಎಂದು ಅವರು ಸೂಚಿಸಿದರು. ಅಗತ್ಯ ವಸ್ತುಗಳು ದೊರೆಯದ ಸ್ಥಿತಿ ಉಂಟಾಗಬಹುದು ಎಂಬ ಆತಂಕ ಜನರಿಗೆ ಬೇಡ. ಯಾರು ಕೂಡ ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸುವ ಅಗತ್ಯ ಇಲ್ಲ. ಯಾವಾಗಲು ಅಗತ್ಯ ವಸ್ತುಗಳು ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಅಗತ್ಯ ವಸ್ತುಗಳ ವಿತರಣೆ ಸಂದರ್ಭದಲ್ಲಿ ನಿರ್ದಿಷ್ಟ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ವ್ಯಾಪಾರಸ್ಥರು ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಅಗತ್ಯ ವಸ್ತುಗಳ ಖರೀದಿಯ ಸಮಯದಲ್ಲಿ ನಗರದಲ್ಲಿ ಹೆಚ್ಚು ಜನ ಸಂದಣಿ ಉಂಟಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗುತ್ತಿದೆ  ಎಂದು ಸಭೆಯಲ್ಲಿ ಭಾಗವಹಿಸಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಸೂಕ್ತವಾದ ವ್ಯವಸ್ಥೆ ಅತೀ ಅಗತ್ಯ ಎಂದು ಶಾಸಕ ಅಂಗಾರ ಸೂಚಿಸಿದರು. ಎಲ್ಲಾ ಗ್ರಾಮಗಳಲ್ಲಿಯೂ ಅಗತ್ಯ ವಸ್ತುಗಳನ್ನು ವಿತರಿಸುವ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ. ಅದಕ್ಕಾಗಿ ಆಯಾ ಗ್ರಾಮದ ಸಹಕಾರಿ ಸಂಘಗಳ ಮೂಲಕ ಅಗತ್ಯ ವಸ್ತುಗಳ ವಿತರಣೆ ಮಾಡಲಾಗುವುದು ಎಂದು ಶಾಸಕ ಎಸ್.ಅಂಗಾರ ತಿಳಿಸಿದರು.

ಇದರಿಂದ ನಗರಕ್ಕೆ ಬರುವವರ ಸಂಖ್ಯೆ ಕಡಿಮೆ ಮಾಡಿ ಜನ ಸಂದಣಿಯನ್ನು ತಪ್ಪಿಸಬಹುದು ಎಂದರು. ಪ್ರತಿ ತಾಲೂಕು ಮಟ್ಟದಲ್ಲಿ ಮತ್ತು ಗ್ರಾಮ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಜನರು ಯಾವುದೇ ಅಗತ್ಯ ಇದ್ದರೂ ಸಮಿತಿಯ ಪ್ರಮುಖರನ್ನು ಸಂಪರ್ಕಿಸಬಹುದು ಎಂದು ಶಾಸಕರು ತಿಳಿಸಿದರು.

 

ಕ್ವಾರಂಟೈನ್‍ನಲ್ಲಿ ಇರುವವರು ಹೊರಗೆ ಸುತ್ತಾಡಿದರೆ ಕಾನೂನು ಕ್ರಮ

ವಿದೇಶದಿಂದ ಬಂದವರು ಮನೆಯಿಂದ ಹೊರ ಬಂದು ಸುತ್ತಾಟ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಕುರಿತು ಏನೆಲ್ಲ ಕ್ರಮ ಕೈಗೊಳ್ಳಲಾಗುತಿದೆ ಎಂದು ಶಾಸಕ ಅಂಗಾರ ಪ್ರಶ್ನಿಸಿದರು. ವಿದೇಶದಿಂದ ಬಂದವರು 15 ದಿನ ಮನೆಯಲ್ಲಿಯಲ್ಲಿ ಕ್ವಾರಂಟೈನ್‍ನಲ್ಲಿ ಇರಬೇಕು. 15 ದಿನದೊಳಗೆ ಸಾರ್ವಜನಿಕ ಸ್ಥಳದಲ್ಲಿ ಸುತ್ತಾಟ ಮಾಡಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್ಯ ಎಸ್‍ಐ ಹರೀಶ್ ಸಭೆಗೆ ತಿಳಿಸಿದರು. ಇವರ ಸಮೀಪದ ಮನೆಯವರೆಗೂ ಇವರ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಹೊರಗಡೆ ಸುತ್ತಾಟ ಮಾಡುವುದು ಕಂಡು ಬಂದರೆ ಮಹಿತಿ ನೀಡುವಂತೆ ಸಮೀಪದ ಮನೆಯವರಿಗೂ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಸುಳ್ಯ ತಾಲೂಕಿನಲ್ಲಿ ಒಟ್ಟು 154 ಮಂದಿ ವಿದೇಶದಿಂದ ಬಂದವರು ಮನೆಯಲ್ಲಿ ಕ್ವಾರಂಟೈನ್‍ನಲ್ಲಿ ಇದ್ದಾರೆ. ಅವರು ಯಾವ ಕಾರಣಕ್ಕೂ 21 ದಿನಗಳ ಕಾಲ ಹೊರ ಮನೆಯಿಂದ ಹೊರ ಬರಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಆರ್.ಸುಬ್ರಹ್ಮಣ್ಯ ತಿಳಿಸಿದ್ದಾರೆ. ವಿದೇಶದಿಂದ ಬಂದವರು ಮಾತ್ರವಲ್ಲದೆ ಅವರ ಸಂಪರ್ಕದಲ್ಲಿರುವ ಮನೆಯವರು ಕೂಡ ಮನೆಯಿಂದ ಹೊರ ಬರದಂತೆ ಎಚ್ಚರ ವಹಿಸಬೇಕು ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಸಲಹೆ ನೀಡಿದರು. ಪುತ್ತೂರು ಡಿವೈಎಸ್‍ಪಿ ದಿನಕರ ಶೆಟ್ಟಿ ಮಾತನಾಡಿ ಸಾರ್ವಜನಿಕರಿಗೆ ಎಲ್ಲಾ ರೀತಿಯ ಸಹಾಯಕ್ಕೆ ಪೊಲೀಸ್ ಇಲಾಖೆ ಸಿದ್ಧವಾಗಿದೆ ಎಂದು ಹೇಳಿದರು.

ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ:

ಕರೋನಾ ಜಾಗೃತಿ ಕುರಿತ ಕ್ರಮಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಅಗತ್ಯ ವಸ್ತುಗಳ ಪೂರೈಕೆ ಮತ್ತಿತರ ವಿಚಾರಗಳನ್ನು ನಗರ ಮತ್ತು ಗ್ರಾಮ ಮಟ್ಟದಲ್ಲಿ ಧ್ವನಿವರ್ಧಕದ ಮೂಲಕ ಪ್ರತಿ ದಿನ ಬಿತ್ತರಿಸಬೇಕು ಎಂದು ಶಾಸಕ ಅಂಗಾರ ಸೂಚಿಸಿದರು.

ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಉಪಾಧ್ಯಕ್ಷೆ ಶುಭದಾ ಎಸ್.ರೈ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ರಿಯಾಝ್ ಕಟ್ಟೆಕ್ಕಾರ್, ಸುಳ್ಯ ತಹಶೀಲ್ದಾರ್ ಅನಂತಶಂಕರ್, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪೊಲೀಸ್ ವೃತ್ತ ನಿರೀಕ್ಷಕ ನವೀನ್‍ಚಂದ್ರ ಜೋಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹದೇವ, ಸಿಡಿಪಿಒ ರಶ್ಮಿ, ನಗರ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ, ಪಂಜ ಕಂದಾಯ ನಿರೀಕ್ಷಕ ಶಂಕರ್, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಪಂಜ ವಲಯ ಅರಣ್ಯಾಧಿಕಾರಿ ಗಿರೀಶ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು. ಅಗತ್ಯ ವಸ್ತುಗಳ ಸರಬರಾಜು ಮಾಡುವ ನಗರದ ವರ್ತಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.